ಕ್ರೈಮ್ ಥ್ರಿಲ್ಲರ್ ಮೂಲಕ ನೋಡುಗರನ್ನು ಸೆಳೆದ “ಗುಳ್ಟು’ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಮೈಸೂರು ಭಾಗದಲ್ಲಿ ಒಂದು ಸೆಂಟರ್‌ನಲ್ಲಿ “ಗುಳ್ಟು’ ಅರ್ಧಶತಕ ಬಾರಿಸಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಅಷ್ಟೇ ಅಲ್ಲ, ಮಲ್ಟಿಪ್ಲೆಕ್ಸ್‌ನಲ್ಲಿ ಒಂದು, ಎರಡು ಪ್ರದರ್ಶನ ಕಾಣುವ ಮೂಲಕವೇ 50 ದಿನಗಳನ್ನು ಪೂರೈಸಿರುವುದು ಇನ್ನಷ್ಟು ಸಂತಸಕ್ಕೆ ಕಾರಣವಾಗಿದೆ.
ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ “ಗುಳ್ಟು’ ಎರಡನೇ ವಾರದಿಂದ ಪ್ರದರ್ಶನ ಕಂಡು, 50 ದಿನ ಪೂರೈಸಿದೆ. ನಿರ್ದೇಶಕ ಜನಾರ್ದನ್ ಅವರ ಮೊದಲ ಚಿತ್ರವಿದು. ಚೊಚ್ಚಲ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಅವರಿಗೆ ಇನ್ನಷ್ಟು ಜವಾಬ್ದಾರಿಯೂ ಹೆಚ್ಚಿಸಿದೆ. ಎಲ್ಲಾ ಸರಿ, ಚಿತ್ರ 50 ದಿನ ಪೂರೈಸಿದೆ. ಚಿತ್ರಕ್ಕೆ ಹಾಕಿದ ಬಂಡವಾಳ ಎಷ್ಟು, ಲಾಭ ಆಗಿದೆಯಾ? ಈ ಪ್ರಶ್ನೆಗೆ ಉತ್ತರಿಸುವ ಜನಾರ್ದನ್, “ಹಾಕಿದ ಹಣ ಹಿಂದಿರುಗಿದೆ.
ಲಾಭವೂ ಬಂದಿದೆ. ಹಾಗಂತ, ದೊಡ್ಡ ಮಟ್ಟದ ಲಾಭವೇನಲ್ಲ. ಸಿನಿಮಾ ಗೆಲುವು ಕೊಡುತ್ತೆ ಎಂಬ ನಂಬಿಕೆ ಇತ್ತು. ಹಾಕಿದ ಹಣ ಬಂದಿದ್ದೇ ಖುಷಿಯ ವಿಷಯ, ಅದರಲ್ಲೂ ಒಂದಷ್ಟು ಲಾಭ ಗಳಿಸಿದ್ದೇವೆ. ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲವಿದು’ ಎನ್ನುತ್ತಾರೆ ನಿರ್ದೇಶಕ ಜನಾರ್ದನ್. ಹಾಗಾದರೆ, ಇದೇ ತಂಡದಿಂದ ಮತ್ತೂಂದು ಚಿತ್ರ ನಿರೀಕ್ಷಿಸಬಹುದಾ?
ಸದ್ಯಕ್ಕಿಲ್ಲ ಎನ್ನುವ ನಿರ್ದೇಶಕ ಜನಾರ್ದನ್, ನಮ್ಮ ಚಿತ್ರದ ಹೀರೋ ನವೀನ್ ಶಂಕರ್‌ಗೆ ಒಂದು ಸಿನಿಮಾ ಸಿಕ್ಕಿದೆ. ಎಲ್ಲವೂ ಮಾತುಕತೆ ನಡೆದಿದ್ದು, ಇಷ್ಟರಲ್ಲೆ ಹೊಸ ಚಿತ್ರ ಸೆಟ್ಟೇರಲಿದೆ. ನಾನು ಎರಡು ಕಥೆ ರೆಡಿ ಮಾಡಿಕೊಂಡಿದ್ದು, ಯಾವ ಚಿತ್ರ ಮಾಡಬೇಕು ಎಂಬ ಗೊಂದಲದಲ್ಲಿದ್ದೇನೆ. ಈಗಾಗಲೇ ನಿರ್ಮಾಪಕರು ಸಿಕ್ಕಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥೆಯೂ ಇದೆ. ಎಮೋಷನಲ್ ಡ್ರಾಮ ಕಥೆಯೂ ಇದೆ.
ಪುನಃ ಸಸ್ಪೆನ್ಸ್ ಥ್ರಿಲ್ಲರ್ ಮಾಡಲು ಇಷ್ಟವಿಲ್ಲ. ನಿರ್ಮಾಪಕರು ಓಕೆ ಮಾಡಿದರೆ, ಎಮೋಷನಲ್ ಡ್ರಾಮ ಕಥೆ ಕೈಗೆತ್ತಿಕೊಳ್ಳುವುದಾಗಿ ಹೇಳುತ್ತಾರೆ ಜನಾರ್ದನ್. “ಗುಳ್ಟು’ ಚಿತ್ರದಲ್ಲಿ ಸೋನುಗೌಡ ನಾಯಕಿಯಾಗಿದ್ದರು. ಉಳಿದಂತೆ ಅವಿನಾಶ್, ರಂಗಾಯಣ ರಘು, ನಾಗೇಂದ್ರ ಶಾ, ಅಪೂರ್ವ, ಸೋಮ, ಪಲ್ಲವಿರಾಜು, ಧನಂಜಯ್, ಶ್ರುತಿ ರಘುನಂದ ಇತರೆ ಕಲಾವಿದರು ನಟಿಸಿದ್ದರು. ಆನಂದ್ ಚಿತ್ರಕ್ಕೆ ಸಂಗೀತ ನೀಡಿದ್ದು, ಶಾಂತಿ ಸಾಗರ್ ಛಾಯಾಗ್ರಹಣವಿದೆ.