Advertisement

ಭಯಾನಕ ಜಾಕೋಬ್‌ ಈಜು ಕೊಳ

11:50 AM Jun 21, 2019 | mahesh |

ಈ ಕೊಳ ಅಪಾಯಕಾರಿ ಎಂದು ಗೊತ್ತಿದ್ದರೂ, ಅನೇಕ ಮಂದಿ ಇಲ್ಲಿ ಪ್ರಾಣ ಕಳೆದುಕೊಂಡಿದ್ದರೂ ಈಜುವ ಸಾಹಸ ಮಾಡಲು ಅನೇಕರು ಧೈರ್ಯ ತೋರುತ್ತಾರೆ.

Advertisement

ಈಜು ಅಂದರೆ ಅನೇಕರಿಗೆ ಬಹು ಇಷ್ಟವಾದ ಹವ್ಯಾಸ. ಸಮುದ್ರವನ್ನೇ ಈಜಿ ಗೆದ್ದವರು ದಾಖಲೆ ನಿರ್ಮಿಸಿದವರು ನಮ್ಮ ನಡುವೆ ಇದ್ದಾರೆ. ಆದರೆ ವಿಶ್ವದಲ್ಲೇ ಅತ್ಯಂತ ಭಯಾನಕ ಎನಿಸಿಕೊಂಡ ಒಂದು ಈಜುಕೊಳವಿದೆ. ಅದರಲ್ಲಿ ಈಜಿ ಮೇಲೆ ಬರುವುದು ಸಮುದ್ರಕ್ಕಿಂತಲೂ ಕಠಿಣ ಸವಾಲಿನ ಕೆಲಸ. ಈಜಲಾಗದೆ ಪ್ರತೀ ವರ್ಷ ಸರಾಸರಿ ಒಂಭತ್ತು ಜನ ಇದರಲ್ಲಿ ಸಾವನ್ನಪ್ಪುತ್ತಾರಂತೆ. ಆದರೂ ಅಲ್ಲಿ ಸಾಹಸ ಪ್ರದರ್ಶನ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ.

ತಣ್ಣಗಿನ ಕೊಳ
ಈ ಅಪಾಯಕಾರಿ ಈಜುಕೊಳವಿರುವುದು ಟೆಕ್ಸಾಸಿನ ಹಿಲ್‌ ಕಂಟ್ರಿಯ ವೆಂಬರ್ಲಿಯಲ್ಲಿ. ಸೈಪ್ರಸ್‌ ಕ್ರೀಕ್‌ ಎಂಬಲ್ಲಿರುವ “ಜಾಕೋಬ್‌ ಕೊಳ’ವೇ ಈ ಪ್ರಸಿದ್ಧ ಈಜು ತಾಣ. ಆಸ್ಟಿನ್‌ನಿಂದ ಇಲ್ಲಿಗೆ ಒಂದು ತಾಸಿನ ಪಯಣ. 1850ರ ದಶಕದಲ್ಲಿ ಅದನ್ನು ಶೋಧಿಸಿದ ಬಳಿಕ ಅದರಲ್ಲಿ ಈಜಲು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾರಣ ಕೊಳದ ನೀರು ಯಾವುದೇ ಋತುವಿನಲ್ಲಿಯೂ 20 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಯೇರುವುದಿಲ್ಲ. ಮೈ ಕೊರೆಯುವ ತಣ್ಣಗಿನ ಅನುಭವ ಆಹ್ಲಾದಕರವಾಗಿರುತ್ತದೆ.

ಅಪಾಯಕಾರಿ ಸುರಂಗಗಳು
ಪ್ರತೀ ಸೆಕೆಂಡಿಗೆ 640 ಲೀಟರ್‌ ನೀರು ಕೊಳವನ್ನು ತುಂಬುತ್ತದೆ. ಹಾಗೆಯೇ ತಳದಲ್ಲಿರುವ ದಾರಿಯ ಮೂಲಕ ಬ್ಲಾಂಕೊ ನದಿಗೆ ಸೇರಿ ಕಡಲಿನತ್ತ ಹೋಗುತ್ತದೆ. ಕೊಳದ ಬಾಯಿ 13 ಅಡಿ ಅಗಲವಾಗಿದೆ. ಇದರಲ್ಲಿ ಕೆಳಗಿಳಿದರೆ ನಾಲ್ಕು ಸುರಂಗಗಳಿವೆ. ಮೊದಲ ಸುರಂಗ 30 ಅಡಿ ಕೆಳಗಿಳಿದು ಲಂಬವಾಗಿ ಸಾಗಿ ನೂರು ಅಡಿಗಳ ತಳ ತಲುಪುತ್ತದೆ. 450 ಅಡಿ ಮತ್ತು 150 ಅಡಿ ಆಳವಿರುವ ಇನ್ನೆರಡು ಸುರಂಗಗಳಿವೆ. ಸುಣ್ಣದ ಕಲ್ಲು ಮತ್ತು ಜಲ್ಲಿ ಕಲ್ಲು ತುಂಬಿದ ಒಂದು ಸುರಂಗವೂ ಇದ್ದು ಅದರ ಬಾಯಿಯನ್ನು ಮುಚ್ಚಲಾಗಿದೆ. ಈಜುಗಾರ ಪರಿಣತನಲ್ಲವಾದರೆ ಸ್ವಲ್ಪ ಯಾಮಾರಿದರೂ ಸುರಂಗದೊಳಗೆ ಸೇರಿ ಹೊರ ಬರಲಾಗದೆ ಜೀವ ಕಳೆದುಕೊಳ್ಳುವುದು ಖಂಡಿತ.

ಎರಡೇ ಗಂಟೆ
ಕೊಳದ ನೀರು ಸ್ಫಟಿಕದಂತೆ ನಿರ್ಮಲವಾಗಿದೆ. ಗುಡ್ಡ ಪ್ರದೇಶದಿಂದ ಬೆಳಗುವ ಸೂರ್ಯನ ಕಿರಣಗಳಿಗೆ ಲಕಲಕ ಹೊಳೆಯುತ್ತದೆ. ನೀರಿನಲ್ಲಿ ಪಾಚಿ ಇದೆ. ವನ್ಯಮೃಗಗಳಿಗೂ ಈ ನೀರು ದಾಹ ತಣಿಸುತ್ತದೆ. ಬೆಳಗ್ಗೆ ಹತ್ತರಿಂದ ಆರರ ತನಕ ಮಾತ್ರ ಈಜಲು ಅವಕಾಶ. ಈ ಜಾಗದಲ್ಲಿ ಎರಡು ತಾಸಿಗಿಂತ ಹೆಚ್ಚು ಹೊತ್ತು ನೀರಿನಲ್ಲಿರಬಾರದು ಎಂಬ ನಿಯಮವಿದೆ. ಈಜುವವರ ರಕ್ಷಣೆಗೆ ಸಾಕಷ್ಟು ವ್ಯವಸ್ಥೆಗಳಿದ್ದರೂ ದುರಂತಗಳು ಸಂಭವಿಸುತ್ತಲೇ ಇದೆ. 1979ರಲ್ಲಿ ಮುಳುಗಿದ ವ್ಯಕ್ತಿಯೊಬ್ಬನ ದೇಹ ಸಿಗಲು 20 ವರ್ಷ ಕಾಯಬೇಕಾಯಿತಂತೆ.

Advertisement

– ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next