ಕನ್ನಡದಲ್ಲಿ ಈ ವರ್ಷವೂ ಹಾರರ್-ಥ್ರಿಲ್ಲರ್ ಸಿನಿಮಾಗಳ ಟ್ರೆಂಡ್ ಮುಂದುವರೆದಿದೆ. ಈ ವರ್ಷದಲ್ಲಿ ಈಗಾಗಲೇ ಮೂರ್‍ನಾಲ್ಕು ಹಾರರ್ -ಥ್ರಿಲ್ಲರ್ ಸಿನಿಮಾಗಳು ತೆರೆಕಂಡಿದ್ದು, ಈ ವಾರ ಅಂಥದ್ದೇ ಮತ್ತೂಂದು ಸಿನಿಮಾ “ಸ್ಕೇರಿ ಫಾರೆಸ್ಟ್’ ಕೂಡ ತೆರೆಗೆ ಬಂದಿದೆ.
ಇನ್ನು ಚಿತ್ರದ ಹೆಸರೇ ಹೇಳುವಂತೆ, “ಸ್ಕೇರಿ ಫಾರೆಸ್ಟ್’ ಚಿತ್ರದ ಬಹುತೇಕ ಕಥೆ, ಪಾತ್ರಗಳು, ದೃಶ್ಯಗಳು ಎಲ್ಲವೂ ಕಾಡಿಗೆ ಅಂಟಿಕೊಂಡೇ ಸಾಗುತ್ತದೆ. ಕಾಡಿನಲ್ಲಿರುವ ಜೀವವೈವಿದ್ಯತೆಯ ಸಂಶೋಧನೆಗಾಗಿ ಯುವಕರ ತಂಡ ಹುಡುಕಾಟಕ್ಕೆ ಹೊರಡುತ್ತದೆ.
ಹೀಗೆ ಹುಡಕಾಟಕ್ಕೆ ಹೊರಟವರಿಗೆ ನಿಗೂಢ ಕಾಡಿನಲ್ಲಿ ಕೆಲವೊಂದು ಅಚ್ಚರಿಯ ಸಂಗತಿಗಳು ಎದುರಾಗುತ್ತದೆ. ಭಯದ ನಡುವೆಯೇ ನಡೆಯುವ ಈ ಹುಡುಕಾಟದಲ್ಲಿ ಅಂತಿಮವಾಗಿ ಈ ಯುವಕರ ತಂಡ ಅಂದುಕೊಂಡಿದ್ದನ್ನು ಹುಡುಕುತ್ತಾರಾ? ತಮ್ಮ ಗುರಿಯನ್ನು ಸಾಧಿಸುತ್ತಾರಾ? ಅನ್ನೋದು ಚಿತ್ರದ ಕಥೆಯ ಒಂದು ಎಳೆ.
ಒಂದಷ್ಟು ಮಂದಿ ಗೊತ್ತಿಲ್ಲದ ನಿಗೂಢ ಜಾಗಕ್ಕೆ ಹೋಗುವುದು, ಅಲ್ಲಿ ಅಗೋಚರ ಶಕ್ತಿಗಳ ಕೈಯಲ್ಲಿ ಸಿಲುಕಿಕೊಳ್ಳುವುದು, ಕೊನೆಗೆ ಅದರಿಂದ ಹೊರಬರಲು ಇನ್ನಿಲ್ಲದಂತೆ ಪ್ರಯತ್ನಿ ಸು ವುದು, ಕೊನೆಗೆ ಹೊರ ಬರುತ್ತಾರಾ, ಇಲ್ಲವಾ ಅನ್ನೋದು ಕ್ಲೈಮ್ಯಾಕ್ಸ್! ಇದರ ಜೊತೆಗೊಂದು ಲವ್‌ಸ್ಟೋರಿ. ಇದು ಇಲ್ಲಿಯವರೆಗೆ ಬಂದಿರುವ ಬಹುತೇಕ ಹಾರರ್ -ಥ್ರಿಲ್ಲರ್ ಸಿನಿಮಾಗಳ ಸಾಮಾನ್ಯ ಎಳೆ. ಅಂಥದ್ದೇ ಎಳೆ ಈ ಸಿನಿಮಾದಲ್ಲೂ ಮುಂದುವರೆದಿರುವುದರಿಂದ ಚಿತ್ರದ ಕಥೆಯ ಬಗ್ಗೆ ವಿಶೇಷವಾಗಿ ಏನು ಹೇಳುವಂಥದ್ದಿಲ್ಲ.
ಇನ್ನು ಚಿತ್ರದ ಪಾತ್ರವರ್ಗಗಳ ಬಗ್ಗೆ ಹೇಳುವು ದಾದರೆ, ಕನ್ನಡ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಹಾಗಾಗಿ, ಚಿತ್ರದ ಬಹುತೇಕ ಪಾತ್ರಗಳಲ್ಲಿ ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳ ಕಲಾವಿದರು ಕಾಣುತ್ತಾರೆ.
ನಟರಾದ ಜಯಪ್ರಭು, ಜೀತ್ ರಾಯ್‌ದತ್, ಟೀನಾ ಪೊನ್ನಪ್ಪ, ಆಮ್ ರೀನ್ ಅಭಿನಯ ಅಷ್ಟಕ್ಕಷ್ಟೇ ಎನ್ನಬಹುದು. ಹಾರರ್-ಥ್ರಿಲ್ಲರ್ ಜೊತೆಗೆ ಒಂದಷ್ಟು ಬೋಲ್ಡ್, ಗ್ಲಾಮರಸ್ ಸನ್ನಿವೇಶಗಳ ಮೂಲಕ ಸಿನಿಪ್ರಿಯರನ್ನು ಸೆಳೆಯುವ ನಿರ್ದೇಶಕರ ಪ್ರಯತ್ನ ಚಿತ್ರದಲ್ಲಿ ವರ್ಕೌಟ್ ಆಗಿಲ್ಲ.
ಕನ್ನಡಕ್ಕಿಂತ ಹಿಂದಿ ನೇಟಿವಿಟಿಯೇ ಚಿತ್ರದಲ್ಲಿ ಹೆಚ್ಚಾಗಿ ಕಾಣುತ್ತದೆ. ಚಿತ್ರದಲ್ಲಿ ನರೇನ್ ಗೇಡಿಯಾ ಛಾಯಾಗ್ರಹಣ, ರಾಜೇಶ್ ಶಾ ಸಂಕಲನ ಗಮನ ಸೆಳೆಯುತ್ತದೆ. ಒಟ್ಟಾರೆ ಹಾರರ್-ಥ್ರಿಲ್ಲರ್ ಚಿತ್ರಗಳ ಕಡೆಗೆ ಒಲವಿರುವವರು, ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ “ಸ್ಕೇರಿ ಫಾರೆಸ್ಟ್’ ನೋಡಿಬರಲು ಅಡ್ಡಿಯಿಲ್ಲ.
ಜಿ.ಎಸ್.ಕೆ