ಭೋಪಾಲ್: ಒಂದು ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ತಂದೆ ಛೀಮಾರಿ ಹಾಕಬಹುದು ಎಂಬ ಭಯದಿಂದ 15 ವರ್ಷದ ಬಾಲಕನೊಬ್ಬ ತಂದೆಯನ್ನು ಕೊಡಲಿಯಿಂದ ಹತ್ಯೆಗೈದಿರುವ ಭೀಕರ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಬುಧವಾರ (ಏಪ್ರಿಲ್ 06) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸಂಕಷ್ಟದಲ್ಲಿ ಲಂಕಾ: ನೆರವು ನೀಡಿದ ಮೋದಿಯವರಿಗೆ ಆಭಾರಿ ಎಂದ ಜಯಸೂರ್ಯ
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಾಲಕನನ್ನು ಬಂಧಿಸಿದ್ದು, ಈ ಸಂದರ್ಭದಲ್ಲಿ ತನ್ನ ಕುಟುಂಬದ ಜೊತೆ ಉತ್ತಮ ಸಂಬಂಧ ಹೊಂದಿಲ್ಲದ ನೆರೆಯ ವ್ಯಕ್ತಿಯೊಬ್ಬರ ಮೇಲೂ ಆರೋಪ ಹೊರಿಸಲು ಯತ್ನಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 3ರಂದು 15 ವರ್ಷದ ಬಾಲಕ ಮಲಗಿದ್ದ ತಂದೆಯನ್ನು ಕೊಡಲಿಯಿಂದ ಹತ್ಯೆಗೈದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ಮಾಹಿತಿ ನೀಡಿದ್ದಾರೆ. ನನ್ನ ತಂದೆಯ ಕೊಲೆ ನಡೆದ ಘಟನೆ ನಂತರ ನೆರೆಹೊರೆಯವರು ಮತ್ತು ಅವರ ಸಂಗಡಿಗರು ಆ ಸ್ಥಳದಿಂದ ಪರಾರಿಯಾಗುತ್ತಿರುವುದನ್ನು ನೋಡಿರುವುದಾಗಿ ಬಾಲಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.
ದೂರಿನ ಆಧಾರದ ಮೇಲೆ ಸಮೀಪದ ಮನೆಯ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ನಂತರ ಬಾಲಕನನ್ನು ವಿಚಾರಣೆಗೊಳಪಡಿಸಿದ ವೇಳೆ ತಂದೆಯನ್ನು ತಾನೇ ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.