Advertisement

Humnabad ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಪುರಸಭೆ ವಿಫಲ!

02:34 PM Jun 17, 2023 | Team Udayavani |

ಹುಮನಾಬಾದ: ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಪಟ್ಟಣದ ಪುರಸಭೆ ಆಡಳಿತ ಸಂಪೂರ್ಣ ವಿಫಲಗೊಂಡಿದ್ದು, ಪುರಸಭೆ ಆಡಳಿತದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಪಟ್ಟಣದಲ್ಲಿ ಒಟ್ಟಾರೆ 27 ವಾರ್ಡ್ ಗಳಿದ್ದು, ಸರಾಸರಿ 60 ಸಾವಿರಕ್ಕೂ ಅಧಿಕ ಜನ ಸಂಖ್ಯೆ ಹೊಂದಿದೆ. ಪಟ್ಟಣದ ಜನರಿಗೆ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ಮೂಲ ಸೌಲಭ್ಯಗಳು ಒದಗಿಸುವುದು ಪುರಸಭೆಯ ಆಧ್ಯ ಕರ್ತವ್ಯವಾಗಿದೆ.

ಆದರೆ, ಅನೇಕ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಬದಲಾದರು ಕೂಡ ಪಟ್ಟಣದ ಜನತೆಗೆ ಇಂದಿಗೂ ಕೂಡ ಸೂಕ್ತ ಸಮಯಕ್ಕೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಪುರಸಭೆ ಆಡಳಿತ ಕೆಲಸ ನಿರ್ವಹಿಸಿಲ್ಲ.

ಹಾಗಂತ ನೀರಿನ ಸಂಗ್ರಹ ಮಟ್ಟದ ಎಲ್ಲಿಯೂ ಕಡಿಮೆ ಇಲ್ಲ. ಕಾರಂಜಾ ಜಲಾಶಯದಿಂದ ಹುಮನಾಬಾದ, ಚಿಟಗುಪ್ಪ, ಹಳ್ಳಿಖೇಡ(ಬಿ) ಪಟ್ಟಣ ಸೇರಿದಂತೆ ಹತ್ತಾರು ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದೆ. ಸದ್ಯಕ್ಕೆ ಕಾರಂಜಾ ಜಲಾಶಯದಲ್ಲಿ ಸೂಕ್ತ ಪ್ರಮಾಣದ ನೀರಿದೆ. ಆದರೆ, ಸೂಕ್ತ ಆಡಳಿತ ನಡೆಸದ ಕಾರಣಕ್ಕೆ ನೀರು ಪೂರೈಕೆ ಮಾಡುವಲ್ಲಿ ಪುರಸಭೆ ಆಡಳಿತ ವಿಫಲಗೊಂಡಿದೆ.

ಕಾಂಗ್ರೆಸ್ ಪಕ್ಷದವರೇ ಆಡಳಿತ ನಡೆಸುತ್ತಿದ್ದು, ವಿಧಾನ ಸಭೆ ಚುನಾವಣೆ ಪೂರ್ವದಿಂದ ಅಂದಿನ ಶಾಸಕ ರಾಜಶೇಖರ ಪಾಟೀಲ ಕೂಡ ಅನೇಕ ಸಭೆಗಳಲ್ಲಿ, ಪುರಸಭೆ ಆಡಳಿತಕ್ಕೆ ಎಚ್ಚರಿಸುವ ಕೆಲಸ ಮಾಡಿದರು. ಪಟ್ಟಣದ ಜನರಿಗೆ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.

Advertisement

ಆದರೂ ಕೂಡ ಪುರಸಭೆಯಲ್ಲಿ ಯಾವುದೇ ಬದಲಾವಣೆಗಳು ಕಾಣದ ಅವರು ಪುರಸಭೆ ವಿರುದ್ಧವೇ ಕೆಂಡ ಕಾರಿದ ಘಟನೆಗಳು ಕೂಡ ನಡೆದಿದ್ದವು. ಅಲ್ಲದೆ, ಕಳೆದ ಒಂದು ವಾರದ ಹಿಂದೆ ನೂತನ ಶಾಸಕ ಡಾ| ಸಿದ್ದು ಪಾಟೀಲ ಪಟ್ಟಣದ ಧನಗಾರಗಡ್ಡಾ, ಎಂಪಿ ಗಲ್ಲಿ ಸೇರಿದಂತೆ ವಿವಿಧಡೆ ಸಂಚಾರ ನಡೆಸಿ ಜನರ ಸಮಸ್ಯೆಗಳು ಆಲಿಸಿದ ಸಂದರ್ಭದಲ್ಲಿ ಬಹುತೇಕ ಜನರು ಕುಡಿವ ನೀರಿನ ಪರಿಹಾರಕ್ಕೆ ಒತ್ತಾಯಿಸಿರುವುದು ಇಲ್ಲಿ ಸ್ಮರಿಸಬಹುದಾಗಿದೆ.

ಮೂರು ದಿನಕ್ಕೆ ಒಂದು ಬಾರಿ ಸರಾಸರಿ ನೀರು ಪೂರೈಕೆ ಮಾಡುವುದಾಗಿ ಹೇಳಿದ ಪುರಸಭೆ. ಒಂದು ವಾರ, 15 ದಿನಗಳು ಕಳೆದರು ಕೂಡ ನೀರು ಪೂರೈಕೆ ಮಾಡುತ್ತಿಲ್ಲ. ದಿನ ಬೆಳಗಾದರೆ ನೀರಿಗಾಗಿ ಪರದಾಟ ನಡೆಯುತ್ತಿದೆ ಎಂದು ವಿವಿಧ ಬಡಾವಣೆಗಳ ಜನರು ಶಾಸ ಪಾಟೀಲ ಎದುರಿಗೆ ಅಳಲು ತೊಡಿಕೊಂಡಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ ಪುರಸಭೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ ಶಾಸಕರು ಪಟ್ಟಣದಲ್ಲಿ ಕುಡಿವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಆದರೂ ಕೂಡ ಇಂದಿಗೂ ಪುರಸಭೆ ಆಡಳಿತ ಸದಸ್ಯರು ಅಥವಾ ಅಧಿಕಾರಿಗಳು ಸಮಸ್ಯೆಗೆ ಮುಕ್ತಿ ನೀಡುವ ಕಡೆಗೆ ಗಮನ ಮಾತ್ರ ಹರಿಸದಿರುವುದು ವಿಪರಿಯಾಸದ ಸಂಗತಿ.

ಈ ಹಿಂದೆ ಪಟ್ಟಣಕ್ಕೆ ಹಳ್ಳಿಖೇಡ(ಕೆ) ಕೆರೆಯಿಂದ ನೀರು ಸರಬರಾಜು ಆಗುತ್ತಿತ್ತು. ಪೈಪ್ ಲೈನ್ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಪಟ್ಟಣದಲ್ಲಿನ ವಿವಿಧಡೆಯ ತೆರೆದ ಭಾವಿಗಳ ನೀರು ಟ್ಯಾಂಕ್ ಮೂಲಕ ಪಟ್ಟಣದ ಜನರಿಗೆ ಪೂರೈಕೆ ಮಾಡುವ ಕೆಲಸ ನಡೆಯುತ್ತಿತ್ತು. ಆದರೆ, ಕಾರಂಜಾದಿಂದ ನೀರು ಪೂರೈಕೆ ಆರಂಭವಾದ ನಂತರ ತೆರೆದ ಭಾವಿಗಳಲ್ಲಿನ ಮೋಟಾರ್ ಇತರೆ ಸಮಾನುಗಳು ಕೂಡ ಮಾಯವಾಗಿವೆ ಎಂಬುವುದು ತಿಳಿದು ಬಂದಿದೆ.

ಕಾರಂಜಾ ನೀರು ಸರಬರಾಜು ಸಮಸ್ಯೆ ಉಂಟಾದಲ್ಲಿ ತೆರೆದ ಭಾವಿಗಳ ನೀರು ಪೂರೈಕೆಗೆ ಪುರಸಭೆ ಅಧಿಕಾರಿಗಳು ಯಾಕೆ ಮುಂದಾಗುತ್ತಿಲ್ಲ. ನೀರಿನ ಪೂರೈಕೆ ಆಗದಿದ್ದರೆ ಪಟ್ಟಣದ ಜನರು ಬದುಕುವುದು ಹೇಗೆ ಎಂದು ಪ್ರಶ್ನಿಸುತ್ತಿರುವ ಜನರು, ಆಡಳಿತ ಮಂಡಳಿಯವರು ಕೂಡಲೇ ಕುಡಿವ ನೀರಿಗೆ ಪರ್ಯಾಯ ವ್ಯವಸ್ಥೆಗಳು ಮಾಡಬೇಕು ಎಂದು ಪಟ್ಟಣದ ಜನರು ಒತ್ತಾಯಿಸುತ್ತಿದ್ದಾರೆ.

ಕುಡಿವ ನೀರು ಪೂರೈಕೆ ನಿರ್ವಹಣೆ ಮಾಡುವ ಅಧಿಕಾರಿಗಳು ಸಿಬ್ಬಂದಿಗಳು ಸೂಕ್ತ ಕೆಲಸ ಮಾಡುತ್ತಿಲ್ಲ. ಪಟ್ಟಣದ ಹಳೆ ಬಡಾವಣೆಗಳ ಜನರಿಗೆ ಕಾರಂಜಾ ನೀರಿನ ಮೇಲೆ ನಿರ್ಭಾರವಾಗಿದ್ದಾರೆ. ಆದರೆ, ಪದೆ ಪದೆ ಸಮಸ್ಯೆ ಎಂದು ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದ್ದು, ಬಡಾವಣೆಗಳ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಪುರಸಭೆ ಆಡಳಿತ ಸುಧಾರಣೆಗೆ ಅಕ್ರ ವಹಿಸಬೇಕು. – ಎಸ್‌ಎ ಬಾಸಿದ್ ಪುರಸಭೆ ಸದಸ್ಯರು

ನಮ್ಮ ಬಡಾವಣೆಯಲ್ಲಿ 7 ದಿನಕ್ಕೆ ಒಂದು ಬಾರಿ ನೀರು ಪೂರೈಕೆ ಮಾಡಲಾಗುತ್ತಿದೆ. ಬಡಾವಣೆಗಳಲ್ಲಿ ಕೊಳವೆ ಭಾವಿಗಳು ಇವೆ. ಆದರೆ, ಉಪ್ಪು ನೀರು ಇರುವ ಕಾರಣಕ್ಕೆ ಕುಡಿಯಲು ಬಳಸುವುದಿಲ್ಲ. ಪುರಸಭೆ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಯಾವ ಕಾರಣಕ್ಕೆ ಸಮಸ್ಯೆ ಎಂದು ವಿಚಾರಿಸಿದರೆ, ಈ ಹಿಂದೆ ಕೆಲಸ ಮಾಡಿದವರು ನಕಲಿ ಸಮಾನುಗಳು ಹಾಕಿದ ಕಾರಣ ಎಂದು ಹೇಳುತ್ತಿದ್ದು, ಕುಡಿವ ನೀರಿನ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. – ವಿರೇಶ ಸೀಗಿ ಪುರಸಭೆ ಸದಸ್ಯರು

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next