Advertisement

ಹಾಸ್ಟೆಲ್‌ನಲ್ಲಿ ಓದಲು ಕರೆಂಟಿಲ್ಲ, ಸ್ನಾನ, ಶೌಚಾಲಯಕ್ಕೂ ನೀರಿಲ್ಲ!

03:33 PM Nov 30, 2021 | Team Udayavani |

ಎಚ್‌.ಡಿ.ಕೋಟೆ: ಸರ್ಕಾರಿ ಮೆಟ್ರಿಕ್‌ ನಂತರದ ಗಿರಿಜನ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕರೆಂಟ್‌ ಕಟ್‌ ಮಾಡಿದ ಪರಿಣಾಮ ವಿದ್ಯಾರ್ಥಿನಿ ಯರು ಕಗ್ಗತ್ತಲಲ್ಲಿ ರಾತ್ರಿ ಕಳೆಯುವುದೇ ಅಲ್ಲದೆ ಶೌಚಾಲಯ, ಸ್ನಾನಕ್ಕೂ ನೀರಿಲ್ಲದೆ ಪರಿತಪಿಸುವಂತಾಗಿದೆ.

Advertisement

ಕೋಟೆ ಪಟ್ಟಣದ ಸರ್ಕಾರಿ ಮೆಟ್ರಿಕ್‌ ನಂತರದ ಗಿರಿಜನ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 60 ಬಾಲಕಿಯರಿದ್ದಾರೆ. ಸ್ವಂತ ಕಟ್ಟಡ ಇಲ್ಲದ ಕಾರಣ ಬಾಡಿಗೆ ಆಧಾರದ ಮೇಲೆ ಕೊಠಡಿಯೊಂದರಲ್ಲಿ ವಿದ್ಯಾರ್ಥಿ ನಿಲಯ ಕಾರ್ಯನಿರ್ವಹಿಸುತ್ತಿದೆ. ಪ್ರತಿ ತಿಂಗಳೂ ಬಳಕೆ ಮಾಡಿದ ವಿದ್ಯುತ್‌ ಶುಲ್ಕ ಕೂಡ ತಪ್ಪದೇ ಪಾವತಿಸಿದೆ.

ಬಾಡಿಗೆ ಕಟ್ಟಡದಲ್ಲಿ ಇನ್ನಿತರ ಕೊಠಡಿ, ಮಳಿಗೆಗಳು ಇದ್ದು, ಅವರು ಬಳಕೆ ಮಾಡಿದ ವಿದ್ಯುತ್‌ ಶುಲ್ಕ ಪಾವತಿಸಿಲ್ಲ ಎಂಬ ಕಾರಣದಿಂದ ವಿದ್ಯಾರ್ಥಿನಿಲಯದ ಕರೆಂಟ್‌ ಕಟ್‌ ಮಾಡಲಾಗಿದೆ. ಒಂದೇ ಕಟ್ಟಡದ ಎಲ್ಲಾ ಪ್ರತ್ಯೇಕ ಮಳಿಗೆಗಳಿಗೂ ಪ್ರತ್ಯೇಕವಾಗಿಯೇ ಮೀಟರ್‌ ಅಳವಡಿಸಲಾಗಿದೆ ಯಾದರೂ ಒಂದೇ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.

ಭಾನುವಾರ ಮಧ್ಯಾಹ್ನದ ವೇಳೆ ವಿದ್ಯುತ್‌ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ತನಕ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಹಾಸ್ಟೆಲ್‌ ನ ವಿದ್ಯಾರ್ಥಿನಿಯರು ಭಾನುವಾರದಿಂದ ರಾತ್ರಿ ಮೊಂಬತ್ತಿಗಳನ್ನು ಹೊತ್ತಿಸಿಕೊಂಡು ರಾತ್ರಿ ಕಳೆದಿದ್ದಾರೆ. ವಿದ್ಯುತ್‌ ಸಂಪರ್ಕ ಕಡಿತಗೊಂಡಿರುವುದರಿಂದ ಶೌಚಾಲಯದ ಬಳಕೆ, ನಿತ್ಯ ಸ್ನಾನ ಸೇರಿದಂತೆ ಇನ್ನಿ ತರ ದೈನಂದಿನ ಬಳಕೆಗೆ ನೀರಿಲ್ಲದೆ ವಿದ್ಯಾರ್ಥಿ ನಿಯರು ಪರದಾಡುವಂತಾಗಿದೆ. ನೀರೇ ಇಲ್ಲದೇ ಇರುವುದರಿಂದ ವಿದ್ಯಾರ್ಥಿನಿಲಯದ ಶೌಚಾ ಲಯ ಗಬ್ಬೆದ್ದು ನಾರುತ್ತಿದೆ.

ಇದನ್ನೂ ಓದಿ;- ಸಂವಿಧಾನ ನಮಗೆಲ್ಲ ದಾರಿದೀಪ

Advertisement

ಮಾಸಿಕ 35 ಸಾವಿರ ರೂ. ವಿದ್ಯುತ್‌ ಶುಲ್ಕವನ್ನು ತಪ್ಪದೇ ಪಡೆದುಕೊ ಳ್ಳುವ ಮಾಲಿಕರು ವಿದ್ಯುತ್‌ ಕಡಿತಗೊಂಡು 2 ದಿನಗಳಾದರೂ ಹಾಸ್ಟೆಲ್‌ಗೆ ಮರು ಸಂಪರ್ಕಕ್ಕೆ ತಲೆ ಕೆಡಿಸಿಕೊಂಡಿಲ್ಲ. ಯಾರೋ ಪಾವತಿಸದೇ ಉಳಿಸಿಕೊಂಡಿರುವ ವಿದ್ಯುತ್‌ ಬಾಕಿ ಹಣಕ್ಕೆ ಪ್ರತಿ ತಿಂಗಳೂ ತಪ್ಪದೇ ಹಣ ಪಾವತಿಸಿರುವುದೇ ಅಲ್ಲದೆ ಪ್ರತ್ಯೇಕ ಮೀಟರ್‌ ಅಳವಡಿಕೆಯಾಗಿದ್ದರೂ ಈ ರೀತಿ ವಿದ್ಯುತ್‌ ಕಡಿತಗೊಳಿಸುವುದು ತರವಲ್ಲ.

ಸಂಬಂಧ ಪಟ್ಟವರು ಇನ್ನಾದರೂ ಇತ್ತ ಗಮನ ಹರಿಸಿ ಯಾರದೋ ಬಾಕಿ ಹಣಕ್ಕೆ ಸಂಪೂರ್ಣ ಹಣ ಪಾವತಿಸಿರುವ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯದ ವಿದ್ಯುತ್‌ ಕಡಿತಗೊಳಿಸುವುದು ಎಷ್ಟರಮಟ್ಟಿಗೆ ಸರಿ, ಗ್ರಾಮ ತೊರೆದು ಪೋಷಕರನ್ನು ಬಿಟ್ಟು ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿನಿಯರ ಪಾಡೇನು ಯೋಚಿಸಿ ಎಂದು ಬಾಲಕಿಯರು ಅಳಲು ತೋಡಿಕೊಂಡಿದ್ದಾರೆ.

ಮೊಂಬತ್ತಿ ಹಚ್ಚಿ ರಾತ್ರಿ ಕಳೆದಿದ್ದೇವೆ:

ಹಾಸ್ಟೆಲ್‌ನ ಬಾಲಕಿಯರ ಅಳಲು ವಿದ್ಯಾರ್ಥಿನಿಲಯಕ್ಕೆ ಭಾನುವಾರದಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ಸೋಮವಾರ ಸಂಜೆಯಾದರೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ, ರಾತ್ರಿಯೇನೂ ಮೊಂಬತ್ತಿ ಬೆಳಕಿನಲ್ಲಿ ದಿನ ಕಳೆದಿದ್ದಾಯಿತು. ಶೌಚಾಲಯ, ಸ್ನಾನ ಸೇರಿದಂತೆ ನಿತ್ಯ ಕರ್ಮದ ಬಳಕೆಗೆ ನೀರಿಲ್ಲದೆ ಪರದಾಡುವ ಸ್ಥಿತಿ ಇದೆ ಎಂದು ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.

“ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿರುವ ವಿಚಾರ ನನಗೆ ತಿಳಿದಿಲ್ಲ. ವಿದ್ಯಾರ್ಥಿನಿಲಯದ ವಿದ್ಯುತ್‌ ಶುಲ್ಕ ಸಂಪೂರ್ಣವಾಗಿ ನಾವು ಪಾವತಿಸಿದ್ದೇವೆ. ಹಾಸ್ಟೆಲ್‌ ಮೇಲ್ವಿಚಾರಕರಿಂದ ಮಾಹಿತಿ ಪಡೆದುಕೊಂಡು ಕ್ರಮವಹಿಸುತ್ತೇನೆ.” ನಾರಾಯಣಸ್ವಾಮಿ, ತಾಲೂಕು ಗಿರಿಜನ ಅಭಿವೃದ್ಧಿ ಅಧಿಕಾರಿ.

– ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next