Advertisement
ರಾಜ್ಯ ಸರ್ಕಾರ ತಾನೇ ಒಪ್ಪಿಕೊಂಡಿರುವಂತೆ ಕೆಎಎಸ್ ಮಖ್ಯ ಪರೀಕ್ಷೆಯ 27 ಐಚ್ಛಿಕ ವಿಷಯಗಳಿಗೆ ಸ್ಕೇಲಿಂಗ್ ಪದ್ಧತಿಯನ್ನು ಕಳೆದ 5 ವರ್ಷಗಳಿಂದ ಜಾರಿಗೆ ತರಲು ಮೀನಾಮೇಷ ಎಣಿಸುತ್ತಿರುವುದು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸುಧಾರಣೆ ಅಥವಾ ಬದಲಾವಣೆ ಅನ್ನುವುದು ಮರೀಚಿಕೆ ಎಂಬುದಕ್ಕೆ ಸಾಕ್ಷಿಯಾಗಿದೆ.
Related Articles
Advertisement
ಏನಿದು “ಸ್ಕೇಲಿಂಗ್’ ಪದ್ಧತಿ: ಕೆಎಎಸ್ ಮುಖ್ಯ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ 27 ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಹೀಗಿರುವಾಗ ಕನ್ನಡ ಸಾಹಿತ್ಯ, ಇತಿಹಾಸ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಸಾರ್ವಜನಿಕ ಆಡಳಿತ ವಿಷಯಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಮೌಲ್ಯಮಾಪನದ ವೇಳೆ ಈ ವಿಷಯಗಳಿಗೆ ಮಾತ್ರ ಆದ್ಯತೆ ಮತ್ತು ಒತ್ತು ನೀಡಲಾಗುತ್ತದೆ. ಉಳಿದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅಲ್ಲದೇ ಮೌಲ್ಯಮಾಪನವನ್ನೂ ಅಷ್ಟಕಷ್ಟೇ ಮಾಡಲಾಗುತ್ತದೆ. ಹೀಗಾಗಿ, ಕನ್ನಡ ಸಾಹಿತ್ಯ ಮತ್ತಿತರ ಸರಳ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೆ.
ಇದರಿಂದಾಗಿ ಉಳಿದ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿಯಲ್ಲೂ ಐಚ್ಛಿಕ ವಿಷಯಗಳಿಗೆ ಸ್ಕೇಲಿಂಗ್ ಪದ್ಧತಿ ಅಳವಡಿಸಬೇಕೆಂದು ಹೋಟಾ ಸಮಿತಿ ಶಿಫಾರಸು ಮಾಡಿತ್ತು.
ಸಿಐಡಿ ವರದಿಯೂ ಹೇಳಿತ್ತು: 2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಿದ್ದ ಸಿಐಡಿ ಈ ಅಂಶವನ್ನು ಉಲ್ಲೇಖೀಸಿತ್ತು. ಈ ಸಾಲಿನಲ್ಲಿ ಮುಖ್ಯ ಪರೀಕ್ಷೆ ಬರೆದ 6 ಸಾವಿರ ಅಭ್ಯರ್ಥಿಗಳ ಪೈಕಿ 716 ಅಭ್ಯರ್ಥಿಗಳು ಭೂಗೋಳಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.
ಇದರಲ್ಲಿ 571 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆ ಪೈಕಿ 167 ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಕರೆಯಲಾಗಿತ್ತು. ಅದೇ ರೀತಿ ಕನ್ನಡ ಸಾಹಿತ್ಯ, ಇತಿಹಾಸ, ಮಾನವ ಶಾಸ್ತ್ರ, ಸಾರ್ವಜನಿಕ ಆಡಳಿತ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾಗಿದ್ದರು ಎಂದು ವರದಿ ಹೇಳಿತ್ತು.
“ಕಾಮಧೇನು’ ವಿಷಯಗಳು: ಕೆಎಎಸ್ ಮುಖ್ಯ ಪರೀಕ್ಷೆಗೆ ಕೃಷಿ, ಕೃಷಿ ಮಾರುಕಟ್ಟೆ, ಸಹಕಾರ, ರೇಷ್ಮೆ, ಮೀನುಗಾರಿಕೆ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಸಿವಿಲ್ ಇಂಜಿನಿಯರಿಂಗ್, ಅರ್ಥಶಾಸ್ತ್ರ ಸೇರಿದಂತೆ ಒಟ್ಟು 27 ಐಚ್ಛಿಕ ವಿಷಯಗಳಿವೆ. ಈ ಪೈಕಿ ಕನ್ನಡ ಸಾಹಿತ್ಯ, ಭೂಗೋಳಶಾಸ್ತ್ರ, ಮಾನವಶಾಸ್ತ್ರ, ಇತಿಹಾಸ, ಸಾರ್ವಜನಿಕ ಆಡಳಿತ ಮತ್ತಿತರ ವಿಷಯಗಳು ಅಭ್ಯರ್ಥಿಗಳ ಪಾಲಿಗೆ ಬಯಸಿದಷ್ಟು ಅಂಕಗಳನ್ನು ಬಾಚಿಕೊಳ್ಳುವ “ಕಾಮಧೇನು’ ವಿಷಯಗಳಿದ್ದಂತೆ.
ಹಾಗಾಗಿ ಇದೇ ವಿಷಯಗಳನ್ನು ಹೆಚ್ಚಾಗಿ ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಂತೆ 2006ನೇ ಸಾಲಿನ ನೇಮಕಾತಿ ವೇಳೆ ಅತಿ ಹೆಚ್ಚು ಅಭ್ಯರ್ಥಿಗಳು ಇತಿಹಾಸ, 2010ರಲ್ಲಿ ಕನ್ನಡ ಸಾಹಿತ್ಯ, 2011ರಲ್ಲಿ ಭೂಗೋಳಶಾಸ್ತ್ರ, 2014ರಲ್ಲಿ ಕನ್ನಡ ಸಾಹಿತ್ಯವನ್ನು ಹೆಚ್ಚು ಅಭ್ಯರ್ಥಿಗಳು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ.
* ರಫೀಕ್ ಅಹ್ಮದ್