ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದ ಬೆನ್ನಲ್ಲೇ ಬಂಧನದಿಂದ ರಕ್ಷಣೆ ಕೊಡುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಬುಧವಾರ ಸುಪ್ರೀಂಕೋರ್ಟ್ ಕೂಡಾ ತಿರಸ್ಕರಿಸಿದ್ದು,ಶುಕ್ರವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂಗೆ ಬಂಧನದಿಂದ ತಪ್ಪಿಸಿಕೊಳ್ಳುವುದು ಮತ್ತಷ್ಟು ತೊಡಕಾಗಿ ಪರಿಣಮಿಸಿದೆ.
ದೆಹಲಿ ಹೈಕೋರ್ಟ್ ಜಾಮೀನು ನೀಡಲು ಮಂಗಳವಾರ ನಿರಾಕರಿಸಿದ ಬಳಿಕ ಪಿ.ಚಿದಂಬರಂ ನಾಪತ್ತೆಯಾಗಿದ್ದಾರೆ. ಮತ್ತೊಂದೆಡೆ ಸಿಬಿಐ ಚಿದಂಬರಂ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದೆ. ಇದರಿಂದಾಗಿ ಚಿದಂಬರಂ ವಿದೇಶಕ್ಕೆ ತೆರಳುವ ಅವಕಾಶಕ್ಕೂ ಸಾಧ್ಯವಿಲ್ಲದಂತಾಗಿದೆ ಎಂದು ಮಾಧ್ಯಮಗಳ ವರದಿ ವಿಶ್ಲೇಷಿಸಿದೆ.
ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಬಂಧನ ಭೀತಿ ಎದುರಿಸುತ್ತಿದ್ದು, ಅವರನ್ನು ಬಂಧಿಸದಂತೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂಬ ಮನವಿಯನ್ನು ಸುಪ್ರೀಂಕೋರ್ಟ್ ನ ಜಸ್ಟೀಸ್ ಎನ್.ವಿ.ರಮಣಾ, ಜಸ್ಟೀಸ್ ಎಂ.ಶಾಂತನಗೌಡರ್ ಮತ್ತು ಜಸ್ಟೀಸ್ ಅಜಯ್ ರಸ್ಟೋಗಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಇವತ್ತಿನ ವಿಚಾರಣೆಯ ಪಟ್ಟಿಯಲ್ಲಿ ನಿಮ್ಮ ಅರ್ಜಿ ಇಲ್ಲ, ಹೀಗಾಗಿ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಶುಕ್ರವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ಎಂದು ತಿಳಿಸಿದೆ.
ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಪಿ.ಚಿದಂಬರಂಗೆ ಜಾಮೀನನ್ನು ನಿರಾಕರಿಸುತ್ತಿದ್ದಂತೆಯೇ, ಚಿದಂಬರಂ ಪರ ವಕೀಲರಾದ ಕಪಿಲ್ ಸಿಬಲ್ ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಮತ್ತೊಂದೆಡೆ ಚಿದಂಬರಂ ಶೋಧಕ್ಕಾಗಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡವನ್ನು ವಿವಿಧೆಡೆ ಕಳುಹಿಸಿತ್ತು. ಆದರೆ ಚಿದಂಬರಂ ನಾಪತ್ತೆಯಾಗಿದ್ದರು.
ಬೆಳಗ್ಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದ ಇಡಿ:
ಚಿದಂಬರಂ ಅವರು ವಿದೇಶಕ್ಕೆ ತೆರಳಿದ್ದಾರೆಂಬ ಶಂಕೆಯ ಮೇರೆಗೆ ಜಾರಿ ನಿರ್ದೇಶನಾಲಯ ಬುಧವಾರ ಬೆಳಗ್ಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿತ್ತು. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಏನಿದು ಐಎನ್ ಎಕ್ಸ್ ಪ್ರಕರಣ:
ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ವಿದೇಶಿ ಹೂಡಿಕೆಗೆ ಸಂಬಂಧಿಸಿದಂತೆ ಅಂದು ಕೇಂದ್ರ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅನುಮತಿ ನೀಡಿದ್ದರು. ಅಲ್ಲದೇ ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಿಂದ ಪುತ್ರ ಕಾರ್ತಿ ಚಿದಂಬರಂಗೆ ಹತ್ತು ಲಕ್ಷ ರೂಪಾಯಿ ಲಂಚ ಸಿಕ್ಕಿರುವುದಾಗಿಯೂ ಸಿಬಿಐ ಆರೋಪಿಸಿತ್ತು. ಈ ಪ್ರಕರಣದಲ್ಲಿ ಪುತ್ರ ಕಾರ್ತಿ ಬಂಧನಕ್ಕೊಳಗಾಗಿದ್ದರು. ಕಾರ್ತಿ ಪ್ರಕರಣದಲ್ಲಿ ಸಿಬಿಐ ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಹೇಳಿಕೆಯನ್ನೂ ಪಡೆದಿತ್ತು.