ನವದೆಹಲಿ:ಆದಾಯ ತೆರಿಗೆ ಸಲ್ಲಿಕೆಗೆ ಪ್ಯಾನ್ ಕಾರ್ಡ್ ಜೊತೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕೆಂಬ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ಆ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಆದಾಯ ತೆರಿಗೆ ಸಲ್ಲಿಕೆಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗಲಿದೆ. ಆದರೆ ಸಾಂವಿಧಾನಿಕ ಪೀಠ ಅಂತಿಮ ತೀರ್ಪು ನೀಡುವವರೆಗೆ ಪ್ಯಾನ್ ಜೊತೆ ಆಧಾರ್ ಸಂಖ್ಯೆ ಕಡ್ಡಾಯ ಮಾಡದಿರುವಂತೆ ಸೂಚಿಸಿ ತಾತ್ಕಾಲಿಕ ತಡೆ ನೀಡಿದೆ.
ಪ್ಯಾನ್ ಕಾರ್ಡ್ ಜೊತೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ನ್ಯಾ.ಎಕೆ ಸಿಕ್ರಿ ಹಾಗೂ ಅಶೋಕ್ ಭೂಷಣ್ ನೇತೃತ್ವದ ಪೀಠ, ಯಾರು ಈಗಾಗಲೇ ಆಧಾರ್ ಕಾರ್ಡ್ ಹೊಂದಿದ್ದಾರೋ ಅವರು ಕಡ್ಡಾಯವಾಗಿ ಪ್ಯಾನ್ ಜೊತೆ ಜೋಡಣೆ ಮಾಡಬೇಕು. ಆದರೆ ಯಾರ ಬಳಿ ಆಧಾರ್ ಕಾರ್ಡ್ ಇಲ್ಲವೋ ಅವರು ಜೋಡಿಸಬೇಕಾಗಿಲ್ಲ ಎಂದು ತೀರ್ಪು ನೀಡಿದೆ.
ಪ್ಯಾನ್ ಜೊತೆ ಆಧಾರ್ ಸಂಖ್ಯೆ ಕಡ್ಡಾಯ ಮಾಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಭಾಗಶಃ ತಡೆಯಾಜ್ಞೆ ನೀಡಿದೆ. ಅಂದರೆ ಆಧಾರ್ ಕಾರ್ಡ್ ಹೊಂದದೆ ಇರುವವರು ಲಿಂಕ್ ಮಾಡಬೇಕಾಗಿಲ್ಲ. ಏತನ್ಮಧ್ಯೆ ಆದಾಯ ತೆರಿಗೆ ಕಾಯ್ದೆ 139ಎಎ ಕಲಂನ ವ್ಯಾಲಿಡಿಟಿಯನ್ನು ಸುಪ್ರೀಂ ಎತ್ತಿಹಿಡಿದಿದೆ.
ಆಧಾರ್ ಕಡ್ಡಾಯ ಮಾಡುತ್ತಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜಿನಕ ಹಿತಾಸಕ್ತಿ ಅರ್ಜಿಗಳ ಬಗ್ಗೆ (ಖಾಸಗಿತನದ ಹಕ್ಕು ಮತ್ತು ಡಾಟಾ ಸೋರಿಕೆಯಾಗುವ ಬೆದರಿಕೆಯ ಕುರಿತು ) ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿ ತೀರ್ಪು ನೀಡಲಿದೆ ಎಂದು ಹೇಳಿದೆ.
ಅಷ್ಟೇ ಅಲ್ಲ ಆಧಾರ್ ಸ್ಕೀಂನಿಂದ ಜನರ ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ದ್ವಿಸದಸ್ಯ ಪೀಠ ಸೂಚನೆ ನೀಡಿದೆ.
ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ, ಕ್ಷೇಮಾಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.
(ಇದನ್ನೂ ಓದಿ:ತೈಲ ಬೆಲೆ ದಿನವೂ ಬದಲು; ಜೂನ್ 16ರಿಂದ ಹೊಸ ನಿಯಮ ಜಾರಿ)