ಬೆಂಗಳೂರು: ಎಸ್ಸಿ ಎಸ್ಟಿ ನೌಕರರ ಮುಂಬಡ್ತಿ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಅದರಿಂದ ಹೊರ ಬರಲು ಸಾಕಷ್ಟು ಸರ್ಕಸ್ ನಡೆಸುತ್ತಿದೆ. ಎಸ್ಸಿ ಎಸ್ಟಿ ನೌಕರರ ಹಿತ ಕಾಯಲು ಸುಗ್ರೀವಾಜ್ಞೆ ಹೊರಡಿಸಿರುವ ಸರ್ಕಾರದ ನಿರ್ಧಾರಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸುಪ್ರೀಂ ಕೋರ್ಟ್‌ನ ಆದೇಶದಂತೆ ಬಡ್ತಿ ಪಟ್ಟಿಯನ್ನು ಸಿದ್ದಪಡಿಸುವಂತೆ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ನೀಡಿ ಆಗಸ್ಟ್ 9 ಕ್ಕೆ ಆರು ತಿಂಗಳು ಮುಕ್ತಾಯವಾಗಿದ್ದು, ಅದರಿಂದ ಬಚಾವಾಗಲು ರಾಜ್ಯ ಸರ್ಕಾರ ಈಗಾಗಲೇ ಆದೇಶ ಮರು ಪರಿಶೀಲನೆ ಹಾಗೂ ಫೆಬ್ರವರಿ 9 ರಂದು ನೀಡಿರುವ ತೀರ್ಪು ಜಾರಿಗೊಳಿಸಲು ಹೆಚ್ಚಿನ ಸಮಯ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ. ಈ ನಡುವೆ ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗದೆ ಇರುವುದರಿಂದ ಅವಕಾಶ ವಂಚಿತ ಇತರ ನೌಕರರು ಅಹಿಂಸಾ ಎಂಬ ಸಂಘಟನೆ ಕಟ್ಟಿಕೊಂಡು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಆ ಪ್ರಕರಣ ಸಪ್ಟೆಂಬರ್ 8 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ಆತಂಕಕ್ಕೆ ಒಳಗಾಗಿದ್ದು, ಆದೇಶ ಪಾಲನೆಯ ಪ್ರಕ್ರಿಯೆ ಆರಂಭವಾಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಸರ್ಕಾರ ಈ ಆಲೋಚನೆ ಮಾಡಿದೆ ಎಂಬ ಮಾತು ಸರ್ಕಾರಿ ವಲಯದಲ್ಲಿ ಕೇಳಿ ಬರುತ್ತಿದೆ.
ಪವಿತ್ರ ಪ್ರಕರಣದ ತೀರ್ಪು ನೀಡಿರುವ ದೀಪಕ್ ಮಿಶ್ರಾ ಈಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುವುದರಿಂದ ರಾಜ್ಯ ಸರ್ಕಾರದ ಪುನರ್ ಪರಿಶೀಲನಾ ಅರ್ಜಿಯೂ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚಿರುವುದರಿಂದ ರಾಜ್ಯ ಸರ್ಕಾರ ಎಸಿ ಎಸ್ಟಿ ನೌಕರರನ್ನು ಸೂಪರ್ ನ್ಯೂಮರರಿ ಕೋಟಾದಡಿ ಇರುವ ಹುದ್ದೆಯಲ್ಲಿಯೇ ಮುಂದುವರೆಸಿ, ಸುಪ್ರೀಂ ಕೋರ್ಟ್ ಆದೇಶದಂತೆ ಸಾಮಾನ್ಯ ವರ್ಗದವರಿಗೆ ದೊರೆಯುವ ಬಡ್ತಿಯನ್ನು ನೀಡಲು ಆಲೋಚನೆ ನಡೆಸುತ್ತಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಮುಂದಾದರೆ, ಸುಮಾರು 10 ಸಾವಿರ ಎಸ್ಸಿ ಎಸ್ಟಿ ನೌಕರರು ಹಿಂಬಡ್ತಿ ಪಡೆಯುವ ಸಾಧ್ಯತೆ ಇದೆ. ವಿಶೇಷ ಮೀಸಲಾತಿ ಮುಂಬಡ್ತಿ ಪಡೆದಿರುವ ನೌಕರರು ಕನಿಷ್ಠ ಎರಡು ಗ್ರೇಡ್ ಹಿಂಬಡ್ತಿಯಾಗುವ ಸಾಧ್ಯತೆ. ಇದರಿಂದ ಸ್ರುಪ್ರೀಂ ಕೋರ್ಟ್ ಆದೇಶದಂತೆ ಸಾಮಾನ್ಯ ವರ್ಗದಲ್ಲಿ ಬಡ್ತಿ ಪಡೆಯುವ ನೌಕರರು ಅರ್ಹತೆಯ ಪಟ್ಟಿ ಸಿದ್ದ ಪಡಿಸುವಲ್ಲಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. 1978 ರಿಂದ ಬಡ್ತಿ ಮೀಸಲಾತಿಯ ಪಟ್ಟಿಯನ್ನು ಪರಿಷ್ಕರಿಸಿ ಹೊಸ ಪಟ್ಟಿ ಸಿದ್ದಪಡಿಸಬೇಕಿರುವುದರಿಂದ ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.
ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತಂದಿರುವ ಉದ್ದೇಶ ಮತ್ತು ಅದರ ಅಗತ್ಯತೆಯ ಬಗ್ಗೆ ರಾಜ್ಯಪಾಲರಿಗೆ ಈಗಾಗಲೇ ಮನವರಿಕೆ ಮಾಡಿ ಕೊಟ್ಟಿದ್ದೇನೆ. ಅವರು ಕಾನೂನು ತಜ್ಞರ ಅಭಿಪ್ರಾಯ ಪಡೆದು ತೀರ್ಮಾಣ ತಿಳಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಸುಪ್ರೀಂ ಕೋರ್ಟ್‌ನಲ್ಲಿ ಆದೇಶ ಮರು ಪರಿಶೀಲನೆಗೆ ಹಾಗೂ ಆದೇಶವನ್ನು ಪಾಲಿಸಲು ಹೆಚ್ಚಿನ ಸಮಯ ನೀಡುವಂತೆಯೂ ಅರ್ಜಿ ಸಲ್ಲಿಸಲಾಗಿದೆ. ವಿಶೇಷ ಅಧಿವೇಶನ ಕರೆಯುವ ಆಲೋಚನೆ ಸರ್ಕಾರದ ಮುಂದೆ ಇಲ್ಲ.
– ಟಿ.ಬಿ.ಜಯಚಂದ್ರ, ಕಾನೂನು ಸಚಿವ.