Advertisement

ಎಸ್ಸಿ-ಎಸ್ಟಿ ಮೀಸಲು; ವಾರದೊಳಗೆ ಸರ್ವಪಕ್ಷ ಸಭೆ: ಸಿಎಂ ಬಸವರಾಜ ಬೊಮ್ಮಾಯಿ

12:52 AM Sep 24, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯಗಳ ಸಹಿತ ಇತರ ವರ್ಗಗಳ ಮೀಸಲಿಗೆ ಸಂಬಂಧಿಸಿ ವಾರದೊಳಗೆ ಸರ್ವಪಕ್ಷ ಸಭೆ ಕರೆಯ ಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ವಿಧಾನಸಭೆಯಲ್ಲಿ ಶುಕ್ರವಾರ ಈ ಕುರಿತು ವಿವರಿಸಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಿಗೆ ಸಂಬಂಧಿಸಿ ಈಗಾಗಲೇ ನಿವೃತ್ತ ನ್ಯಾಯ ಮೂರ್ತಿಗಳಾದ ನಾಗಮೋಹನ ದಾಸ್‌, ನ್ಯಾ| ಸುಭಾಷ್‌ ಆಡಿಯವರು ಪ್ರತ್ಯೇಕ ವರದಿ ಸಲ್ಲಿಸಿದ್ದಾರೆ.

ಇದೊಂದು ಸೂಕ್ಷ್ಮ ವಿಷಯ. ಮೀಸಲಿಗೆ ಸಂಬಂಧಿಸಿ 2 ವರದಿಗಳು ಇರುವುದರಿಂದ ಸರ್ವಪಕ್ಷ ಮುಖಂಡರ ಸಭೆ ನಡೆಸಿ, ಮುಂದೇನು ಮಾಡಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು.

ಸಂವಿಧಾನದ ಆಶಯ, ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿ ಸಮಸ್ಯೆ ಬಗೆಹರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಎಚ್ಚರ ವಹಿಸಲಾಗುವುದು ಎಂದರು.

ಎಸ್‌ಸಿ-ಎಸ್‌ಟಿ ಮೀಸಲು ಹೆಚ್ಚಳಕ್ಕಾಗಿ 200 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ವಾಲ್ಮೀಕಿ ಸ್ವಾಮೀಜಿಯವರು ಸತ್ಯಾಗ್ರಹ ಕೈಬಿಡಬೇಕು ಎಂದು ಇದೇ ವೇಳೆ ಸಿಎಂ ಮನವಿ ಮಾಡಿದರು.

Advertisement

ಸೂಕ್ತ ಕ್ರಮಕ್ಕೆ ಒತ್ತಾಯ: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ವಾಲ್ಮೀಕಿ ಸ್ವಾಮೀಜಿ ಯವರು ಹಲವು ದಿನಗಳಿಂದ ಧರಣಿ ನಡೆಸುತ್ತಿದ್ದು, ಮೀಸಲು ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ಸರ್ವಪಕ್ಷ ಸಭೆ ನಡೆಸಲು ಸರ್ಕಾರ ನಿರ್ಧರಿಸಿರುವುದಕ್ಕೆ ನಮ್ಮ ಸಹಮತವಿದೆ. ಹಾಗೆಯೇ ಸ್ವಾಮೀಜಿಯವರು ಸತ್ಯಾಗ್ರಹ ಕೈಬಿಡಬೇಕು ಎಂದ ಮನವಿ ಮಾಡಿದರು.

ಮೀಸಲು ವಿಷಯವಾಗಿ ಸರಕಾರ ಎಲ್ಲರ ವಿಶ್ವಾಸ ಪಡೆದುಕೊಳ್ಳಲು ಸಭೆ ನಿರ್ಧರಿಸಿದೆ. ವಾಲ್ಮೀಕಿ ಸ್ವಾಮೀಜಿಯವರು ಧರಣಿ ಹಿಂಪಡೆಯಬೇಕು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next