Advertisement

ಎಸ್‌ಸಿ –ಎಸ್‌ಟಿ ಭಡ್ತಿ ಮೀಸಲಾತಿ: ಇತರರ ಪಾಲಿಗೆ ಫ‌ಜೀತಿ?

03:50 AM Mar 22, 2017 | Team Udayavani |

ಮೀಸಲಾತಿಪರ ವಾದಗಳು ಏನೇ ಇದ್ದರೂ ಸರಕಾರಿ ಸೇವೆಗಳಲ್ಲಿ ವಿದ್ಯಾರ್ಹತೆ, ಸೇವಾರ್ಹತೆ ಹಾಗೂ ಕಾರ್ಯಸಾಮರ್ಥ್ಯಗಳ ಅಗತ್ಯವನ್ನು ನಿರ್ಲಕ್ಷಿಸಲಾಗದು. ನೇಮಕಾತಿಯ ಸಂದರ್ಭದಲ್ಲಿ ಮೀಸಲಾತಿ ಒಪ್ಪಿತ ವಿದ್ಯಮಾನ ನಿಜ. ಆದರೆ ಈ ನೀತಿಯನ್ನು ಭಡ್ತಿಗಳಿಗೂ ಅನ್ವಯಿಸಬೇಕೆಂಬುದು ಚರ್ಚಾಸ್ಪದ.

Advertisement

ಉದ್ಯೋಗದಲ್ಲಿ ಭಡ್ತಿ ನೀಡಿಕೆಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿ – ಪಂಗಡಗಳ ನೌಕರರಿಗೆ “ಸೇವಾ ಹಿರಿತನದ ಮಹತ್ವ’ ನೀಡುವ ಉದ್ದೇಶದ ರಾಜ್ಯ ಸರಕಾರದ ನೀತಿಯನ್ನು ಸುಪ್ರೀಂ ಕೋರ್ಟ್‌ ಅನೂರ್ಜಿತಗೊಳಿಸಿ ತೀರ್ಪಿತ್ತಿದೆಯಷ್ಟೆ? ಇದೀಗ ಈ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲು ಸಿದ್ದರಾಮಯ್ಯ ಸಂಪುಟ ನಿರ್ಧರಿಸಿದೆ. 

ಈ ನಿರ್ಧಾರ ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳ ಸಾವಿರಾರು ಉದ್ಯೋಗಿಗಳಿಗೆ ಅಷ್ಟೇನೂ ರುಚಿಸದ ತುತ್ತಾಗಿ ಪರಿಣಮಿಸಿದೆಯೆಂಬುದು ನಿಸ್ಸಂದೇಹ. ಈ “ಭಡ್ತಿ ಮೀಸಲಾತಿ’ ನೀತಿ, ಐಎಎಸ್‌, ಐಪಿಎಸ್‌ ಹಾಗೂ ಐಎಫ್ಎಸ್‌ ಸೇವೆಗಳಿಗೆ ಹೊರತಾದ ಇತರ ಹುದ್ದೆಗಳಲ್ಲಿರುವವರ ಕಣ್ಣಿಗೆ ಅತ್ಯಂತ ಅನಾಕರ್ಷಕವಾಗಿ ಕಾಣಿಸುತ್ತಿರುವುದು ನಿಜ. ಈ ಮೂಲಕ ಇಂಥ ನೌಕರರು, ತಮ್ಮೆಲ್ಲ ಸೇವಾ ಸಾಮರ್ಥ್ಯ ಹಾಗೂ ಅರ್ಹತೆಗಳ ಹೊರತಾಗಿಯೂ ಭಡ್ತಿ ಅವಕಾಶದಿಂದ ವಂಚಿತರಾದಂತಾಗಿದೆ. ಎಸ್‌ಸಿ – ಎಸ್‌ಟಿ ನೌಕರರೆಂಬ ಕಾರಣಕ್ಕಾಗಿ ತಮ್ಮ ಕಣ್ಣೆದುರಲ್ಲೇ ಭಡ್ತಿ ಪಡೆಯುವ ತಮ್ಮ ಕಿರಿಯ ಸಹೋದ್ಯೋಗಿಗಳ ಕೈಕೆಳಗೆ ಕೆಲಸ ಮಾಡಬೇಕಾದ ಸ್ಥಿತಿ ಇಂಥ ಪರಿಶಿಷ್ಟೇತರ ನೌಕರರಿಗೆ ಎದುರಾಗಲಿದೆ. ಸರಕಾರಿ ಉದ್ಯೋಗ ಅನಾಕರ್ಷಕವೆನ್ನಿಸಲು ಇದು ಬಲವಾದ ಕಾರಣವಾಗಲಿದೆ. ಸರಕಾರಿ ಹುದ್ದೆಗಳಲ್ಲಿ ಅರುಚಿ ಮೂಡಲು ಇನ್ನೊಂದು ಕಾರಣವೆಂದರೆ ಕೆಪಿಎಸ್‌ಸಿಯಂಥ ವ್ಯವಸ್ಥೆಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ. ಕಳೆದೆರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಗಜೆಟೆಡ್‌ ಪ್ರೊಬೇಶನರಿ ಹುದ್ದೆಗಳಿಗೆ ನಡೆದಿರುವ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದವರಿದ್ದಾರೆ. ಅಭ್ಯರ್ಥಿಗಳು ಪರೀಕ್ಷೆ ಬರೆದು ಎಷ್ಟೋ ವರ್ಷಗಳ ಬಳಿಕವಷ್ಟೆ ಫ‌ಲಿತಾಂಶ ಘೋಷಣೆಯಾಗುವುದು ಒಂದು ಪದ್ಧತಿಯೇ ಆಗಿ ಹೋಗಿದೆ. 

ನ್ಯಾಯಾಲಯದಲ್ಲಿ ಭಡ್ತಿ ಮೀಸಲಾತಿ ಪ್ರಶ್ನೆ
ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಧಿನಲ್ಲಿನ ಕೇಸುಗಳ ವಿಚಾರಣಾ ಸರಣಿಗೆ ರಾಜ್ಯದ ಕೊಡುಗೆ ಸಾಕಷ್ಟು ದೊಡ್ಡದೇ! ಇದೇ ಹಿನ್ನೆಲೆಯಲ್ಲಿ, ರಾಜ್ಯ ಸರಕಾರದ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಕೆ ಕುರಿತ ನಿರ್ಧಾರವನ್ನು ವಿಶ್ಲೇಷಣೆಗೊಳಪಡಿಸಬೇಕಾಗಿದೆ. ಈ ಹಿಂದೆ 2006ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಪೀಠವೊಂದು ಕರ್ನಾಟಕ ಸರಕಾರದ ಇಂಜಿನಿಯರ್‌ ಆಗಿದ್ದ ಎಂ. ನಾಗರಾಜ್‌ ಸಲ್ಲಿಸಿದ್ದ ದೂರಿನ ಪರಿಶೀಲನೆ ನಡೆಸಿತ್ತು. ಇದೀಗ ಭಡ್ತಿ ಮೀಸಲಾತಿ ವಿಷಯದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ಕೂಡ ಕರ್ನಾಟಕಕ್ಕೇ ಸಂಬಂಧಪಟ್ಟಿದೆ. ರಾಜ್ಯ ಸರಕಾರ 1978ರಲ್ಲೇ ಎಸ್‌ಸಿ – ಎಸ್‌ಟಿ ನೌಕರರಿಗೆ “ತ್ವರಿತ ಭಡ್ತಿ’ ನೀಡುವ ಬಗೆಗಿನ ನೀತಿಯನ್ನು ಜಾರಿಗೊಳಿಸಿತ್ತು. 77ನೆಯ ಸಂವಿಧಾನ ತಿದ್ದುಪಡಿ (ಎಸ್‌ಸಿ – ಎಸ್‌ಟಿಗಳ ಭಡ್ತಿ ಮೀಸಲಾತಿ ಅವಕಾಶಕ್ಕೆ ರಕ್ಷಣೆ ಒದಗಣೆ), 81ನೆಯ ತಿದ್ದುಪಡಿ (ಮೀಸಲಾತಿಗೆ ಬೆಂಬಲ ನೀಡಿಕೆ) ಹಾಗೂ 82ನೆಯ ತಿದ್ದುಪಡಿ (ಭಡ್ತಿ ಮೀಸಲಾತಿ ವೇಳೆ ಅಂಕ ಅರ್ಹತೆ ಹಾಗೂ ಇತರ ಅಂಶಗಳಲ್ಲಿ ಸಡಿಲಿಕೆ)ಗಳಿಗೂ ಮುನ್ನವೇ ಕರ್ನಾಟಕ ಸರಕಾರ ಜಾರಿಗೊಳಿಸಿದ್ದ ನೀತಿ ಇದು. 

ಇದೇ ವಿಷಯಕ್ಕೆ ಸಂಬಂಧಿಸಿರುವ ಪ್ರಸ್ತಾವಿತ 117ನೆಯ ಸಂವಿಧಾನ ತಿದ್ದುಪಡಿ ಮಸೂದೆಗೆ ಕೇಂದ್ರ ಸರಕಾರ ಇನ್ನಷ್ಟೇ ಲೋಕಸಭೆಯ ಸಮ್ಮತಿಯನ್ನು ದೊರಕಿಸಿಕೊಳ್ಳಬೇಕಿದೆ. 2012ರಲ್ಲಿ ಯುಪಿಎ ಸರಕಾರ ಮಂಡಿಸಿದ್ದ ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯ ಸಮ್ಮತಿ ಲಭಿಸಿದೆ. ಎಸ್‌ಸಿ ಹಾಗೂ ಎಸ್‌ಟಿ ನೌಕರರ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಅಡ್ಡಿಯಾಗಿ ಪರಿಣಮಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಅನೂರ್ಜಿತಗೊಳಿಸುವುದು 117ನೆಯ ತಿದ್ದುಪಡಿ ಮಸೂದೆಯ ಆಶಯ.

Advertisement

ಸು. ಕೋ. ತೀರ್ಪು ಎಬ್ಬಿಸಲಿರುವ ಕೋಲಾಹಲ
ಕಳೆದ ತಿಂಗಳು ಸು. ಕೋರ್ಟ್‌ ನ್ಯಾಯಪೀಠ, ಭಡ್ತಿ ನಿರಾಕರಣೆ ಪ್ರಶ್ನಿಸಿ ಕರ್ನಾಟಕ ಸರಕಾರದ ಇಂಜಿನಿಯರ್‌ ಬಿ.ಕೆ. ಪವಿತ್ರಾ ಅವರು ಸಲ್ಲಿಸಿದ್ದ ದೂರನ್ನು ವಿಚಾರಣೆಗೆ ಸ್ವೀಕರಿಸಿತು. 1987ರಲ್ಲಿ ನೇಮಕಗೊಂಡಿದ್ದ ಎಸ್‌ಸಿ – ಎಸ್‌ಟಿ ಇಂಜಿನಿಯರ್‌ಗಳಿಗೆ ಈಗಾಗಲೇ ಸ.ಕಾ. ಇಂಜಿನಿಯರ್‌ಗಳಾಗಿ ಭಡ್ತಿ ನೀಡಲಾಗಿದೆ; ಆದರೆ ಅವರಿಗಿಂತಲೂ 11 ವರ್ಷ ಹಿಂದೆ ನೇಮಕಗೊಂಡಿದ್ದ ಸಾಮಾನ್ಯ ವರ್ಗಗಳ ವ್ಯಾಪ್ತಿಯಲ್ಲಿ ಬರುವ ಇಂಜಿನಿಯರ್‌ಗಳ ಭಡ್ತಿ ವಿಚಾರ ಇನ್ನೂ “ಪರಿಶೀಲನೆ’ಯ ಹಂತದಲ್ಲೇ ಇದೆ ಎಂದು ಪವಿತ್ರಾ ದೂರಿದ್ದರು. ನ್ಯಾಯಾಲಯ, 1978ರಿಂದ ಅನ್ವಯವಾಗುವಂತೆ, ಕರ್ನಾಟಕ ಸರಕಾರ ಎಸ್‌ಸಿ – ಎಸ್‌ಟಿ ನೌಕರರಿಗೆ ನೀಡಿದ್ದ “ಸೇವಾ ಹಿರಿತನ ಭಡ್ತಿ ಆದ್ಯತೆ’ಯನ್ನು ರದ್ದುಪಡಿಸಿ ತೀರ್ಪಿತ್ತಿದೆಯಲ್ಲದೆ, ಮೀಸಲಾತಿ ನೀತಿಯ ಫ‌ಲವಾಗಿ ಹಾಗೆ ಭಡ್ತಿ ಪಡೆದ ಎಲ್ಲ ನೌಕರರಿಗೆ ಮೂರು ತಿಂಗಳ ಒಳಗಾಗಿ ಹಿಂಭಡ್ತಿ ನೀಡುವಂತೆಯೂ ತಾಕೀತು ಮಾಡಿದೆ.

ಈ ತೀರ್ಪು ದೊಡ್ಡ ಕೋಲಾಹಲವನ್ನೇ ಎಬ್ಬಿಸಲಿದೆ. ಕಾರಣ, 63 ಸರಕಾರಿ ಇಲಾಖೆಗಳಲ್ಲಿ ಮುಂಭಡ್ತಿ ಹಾಗೂ ಹಿಂಭಡ್ತಿ ಪ್ರಕ್ರಿಯೆಗಳು ನ್ಯಾಯಾಲಯ ವಿಧಿಸಿದ ಗಡುವಿನೊಳಗೆ ಪೂರ್ಣಧಿಗೊಳ್ಳಬೇಕಾಗಿದೆ. ಎಸ್‌ಸಿ – ಎಸ್‌ಟಿಗಳಿಗೆ ಆದ್ಯತೆಯ ಮುಂಭಡ್ತಿ ನೀಡುವ ಮೊದಲು ಸರಕಾರ ಅವರ ಪ್ರಾತಿನಿಧ್ಯದ ಪೂರಕತೆಯ ಕೊರತೆ ಅಥವಾ ಸಾಧಕ – ಬಾಧಕಗಳನ್ನು ಪರಿಶೀಲಿಸಬೇಕು, ಅವರ “ಹಿಂದುಳಿದ ಸ್ಥಿತಿ’ಯನ್ನು ಸರಿಯಾದ ಮಾನದಂಡದಲ್ಲಿ ನಿಷ್ಕರ್ಷಿಸಬೇಕು ಹಾಗೂ ಅವರ ಒಟ್ಟಾರೆ ಸೇವಾ ಸಾಮರ್ಥ್ಯವನ್ನು ಲಕ್ಷ್ಯದಲ್ಲಿರಿಸಿಕೊಳ್ಳಬೇಕು ಎಂದೂ ನ್ಯಾಯಾಲಯ ಸೂಚಿಸಿದೆ. ನ್ಯಾಯಾಲಯ ಈ ಮೂಲಕ, ಮೇಲೆ ಹೇಳಿದ ಎಂ. ನಾಗರಾಜ್‌ ಕೇಸಿನಲ್ಲಿ ನೀಡಲಾಗಿದ್ದ ತೀರ್ಪನ್ನೇ ಪುನರುಚ್ಚರಿಸಿದಂತಾಗಿದೆ.

ಹೀಗೆ ಎಸ್‌ಸಿ-ಎಸ್‌ಟಿ ನೌಕರರಿಗೆ ಭಡ್ತಿ ಮೀಸಲಾತಿ ಕಲ್ಪಿಸಿರುವುದು ಕರ್ನಾಟಕ ಸರಕಾರ ಮಾತ್ರವಲ್ಲ. ಇತರ ಕೆಲವು ರಾಜ್ಯಗಳೂ ಈ ಕೆಲಸ ಮಾಡಿವೆ. ಇಂಥ ರಾಜ್ಯಗಳ ನಿರ್ಧಾರಗಳನ್ನು ಕೂಡ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದೆ. 1992ರಷ್ಟು ಹಿಂದೆಯೇ ಸಾಕಷ್ಟು ಸುದ್ದಿ ಮಾಡಿದ ಇಂದ್ರಾ ಸಾಹಿ° – ಕೇಂದ್ರ ಸರಕಾರದ ನಡುವಿನ ಕೇಸಿನಲ್ಲಿ ಭಡ್ತಿ ಮೀಸಲಾತಿ ಕ್ರಮ ಸಂವಿಧಾನ ವಿರೋಧಿಯೆಂದು ಸು.ಕೋ. ತೀರ್ಪು ನೀಡಿತ್ತು. ಆದರೆ ಕೇಂದ್ರವಾಗಲಿ ರಾಜ್ಯ ಸರಕಾರಗಳಾಗಲಿ ಈ ತೀರ್ಪಿಗೆ ಸೊಪ್ಪು ಹಾಕಿಲ್ಲ. ಉತ್ತರಪ್ರದೇಶದಲ್ಲಿ, ಸುಭಾಶ್ಚಂದ್ರ ಗೌತಮ್‌ ಎಂಬವರು ಹೂಡಿದ್ದ ಖಟ್ಲೆಯ ಸಂಬಂಧ ಸು. ಕೋ. ಹೊರಧಿಡಿಸಿದ ತೀರ್ಪಿಗನುಗುಣವಾಗಿ ಅಲ್ಲಿನ (ಬಿಎಸ್‌ಪಿ) ಸರಧಿಕಾರ 15,226 ಎಸ್‌ಸಿ, ಎಸ್‌ಟಿ ನೌಕರರಿಗೆ ಹಿಂಭಡ್ತಿ ನೀಡಿತ್ತು.

ನಿರುತ್ಸಾಹಕ್ಕೆ ಕಾರಣ ಭಡ್ತಿ ಮೀಸಲಾತಿ
ನೇಮಕಾತಿಯ ಸಂದರ್ಭದಲ್ಲಿ ಮೀಸಲಾತಿ ಇದ್ದೇ ಇದೆ; ಇದು ಸಮರ್ಥನೀಯ ಕ್ರಮ ಎಂಬುದು ಒಂದು ಒಪ್ಪಿತ ವಿದ್ಯಮಾನವೇ ಹೌದಾದರೂ, ಈ ನೀತಿಯನ್ನು ಭಡ್ತಿಗಳಿಗೂ ಅನ್ವಯಿಸಬೇಕೆಂಬ ಪ್ರಸ್ತಾವ ತೀರಾ ಚರ್ಚಾಸ್ಪದ. ಈಗ ಅನೇಕ ವರ್ಷಗಳಿಂದ “ಇಂಜಿನಿಯರ್‌ ಇನ್‌ ಚೀಫ್’ ಹಾಗೂ “ಚೀಫ್ ಇಂಜಿನಿಯರ್‌’ಗಳಂಥ ಹಿರಿಯ ಹುದ್ದೆಗಳೆಲ್ಲವೂ ಎಸ್‌ಸಿ – ಎಸ್‌ಟಿಗಳ ಪಾಲಾಗಿವೆ. ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ನೌಕರರು, ತಮಗಿರುವ ಸೇವಾ ಸಾಮರ್ಥ್ಯ ಹಾಗೂ ಅರ್ಹತೆಯ ಹೊರತಾಗಿಯೂ ಕೇವಲ ಒಂದು ಭಡ್ತಿ ಅಥವಾ ಭಡ್ತಿಯೇ ಇಲ್ಲದೆ ನಿವೃತ್ತಿ ಹೊಂದುತ್ತಿದ್ದಾರೆ. ಅವರಲ್ಲಿ ಕೆಲಸದ ಉತ್ಸಾಹವೇ ಬತ್ತಿದ್ದರೆ ಅಚ್ಚರಿಯಿಲ್ಲ!

ಭಡ್ತಿ ವಿಷಯದಲ್ಲಿ ಸಾಮಾನ್ಯ ಅಥವಾ “ಇತರ ಹಿಂದುಳಿದ ವರ್ಗಗಳ’ ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಷ್ಟ್ರಮಟ್ಟದ ಅಥವಾ ರಾಜ್ಯಮಟ್ಟದ ರಾಜಕೀಯ ಮುಖಂಡರು ಸಾರ್ವಜನಿಕವಾಗಿ ಸೊಲ್ಲೆತ್ತಲು ಸಿದ್ಧರಿಲ್ಲ. ಎಸ್‌ಸಿ ಹಾಗೂ ಎಸ್‌ಟಿ ವರ್ಗಗಳ ವ್ಯಾಪ್ತಿಯಲ್ಲಿ ಬರುವ ಎಲ್ಲರೂ ದುರ್ಬಲ ವರ್ಗದವರು ಎಂದು ಪರಿಗಣಿಸುವುದು ತಪ್ಪು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. 

ಈ ಎರಡೂ ವಿಭಾಗಗಳಲ್ಲಿ ಮಧ್ಯಮ ವರ್ಗದವರೂ ಇದ್ದಾರೆ; ಸಿರಿವಂತರೂ ಇದ್ದಾರೆ. ಒಬ್ಬ ಮಂತ್ರಿಯನ್ನೋ, ಐಎಎಸ್‌/ಐಪಿಎಸ್‌ ಅಧಿಕಾರಿಯನ್ನೋ ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿ ಎಂದು ವರ್ಗೀಕರಿಸುವುದು ಸಮಂಜಸವಾಗದು. ಅನೇಕ ಎಸ್‌ಸಿ- ಎಸ್‌ಟಿ ಅಧಿಕಾರಿಗಳಿಗೆ ಅತ್ಯುತ್ತಮ ಉದ್ಯೋಗಿಗಳಿಗೆ ಸರಿಧಿಮಿಧಿಗಿಲೆನಿಸಬಲ್ಲಷ್ಟು ಅರ್ಹತೆ, ಪ್ರತಿಭೆ ಹಾಗೂ ಕಾರ್ಯಸಾಮರ್ಥ್ಯಗಳಿವೆ ಎಂಬ ಅಂಶವನ್ನೂ ಗಮನಿಸಬೇಕು. ನೇಮಕಾತಿಯ ಸಮಯದಲ್ಲಿ ತನ್ನ ಮಗ/ಮಗಳಿಗೆ ಭಡ್ತಿ ಮೀಸಲಾತಿ ಬೇಕಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುವ ಎಸ್‌ಸಿ -ಎಸ್‌ಟಿ ತಾಯ್ತಂದೆಯರೂ ಇದ್ದಾರೆ. ಶ್ರೇಷ್ಠ ನ್ಯಾಯಾಲಯದ ಹಿಂದಿನ ನ್ಯಾಯಧೀಶರೊಬ್ಬರ ಹಾಗೂ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರ ನೇಮಕಾತಿಯ ಸಂದರ್ಭದಲ್ಲಿ ನಡೆದ ಸಂಗತಿ ಇದು.

ಮೀಸಲಾತಿಪರ ವಾದಗಳು ಏನೇ ಇದ್ದರೂ, ಸರಕಾರಿ ಸೇವೆಗಳಲ್ಲಿ ವಿದ್ಯಾರ್ಹತೆ, ಸೇವಾರ್ಹತೆ ಹಾಗೂ ಕಾರ್ಯಸಾಮರ್ಥ್ಯಗಳ ಅಗತ್ಯವನ್ನು ನಿರ್ಲಕ್ಷಿಸಲಾಗದು. ಬಹುಶಃ ಇದೇ ಕಾರಣಕ್ಕಾಗಿ ನಮ್ಮ ಸಂವಿಧಾನದಲ್ಲಿ ಎಷ್ಟೇ ತಿದ್ದುಪಡಿಗಳು ಆಗಿ ಹೋಗಿದ್ದರೂ 335ನೆಯ ವಿಧಿಯನ್ನು ಇನ್ನೂ ಉಳಿಸಿಕೊಳ್ಳಲಾಗಿದೆ. “ಎಸ್‌ಸಿ ಮತ್ತು ಎಸ್‌ಟಿಗಳ ಹಕ್ಕು ಪ್ರತಿಪಾದನೆಯನ್ನು ಕೇಂದ್ರ ಅಥವಾ ರಾಜ್ಯ ಸರಕಾರವೊಂದರ ಆಡಳಿತ ಸಾಮರ್ಥ್ಯದ ನಿಭಾಧಿವಣೆಯ ಸುಸಾಂಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡೇ, ಅದಕ್ಕನುಗುಣವಾಗಿಯೇ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ’ ಎಂಬ ಮಾತನ್ನು ಒತ್ತಿ ಹೇಳುತ್ತದೆ ಈ 335ನೆಯ ವಿಧಿ.

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next