Advertisement

ಸೆ.23ಕ್ಕೆ ಎಸ್ಸಿ-ಎಸ್ಟಿ 152 ಸಮುದಾಯದ ಸಮಾವೇಶ

03:56 PM Jul 24, 2018 | |

ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಸೆ. 23ರಂದು ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 152 ಸಮುದಾಯಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ಹೋರಾಟ ವೇದಿಕೆ ರಾಜ್ಯ ಅಧ್ಯಕ್ಷ, ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತಿಳಿಸಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪರಿಶಿಷ್ಟ ಜಾತಿ-ಪಂಗಡದ 152 ಸಮುದಾಯಗಳಿಗೆ
ಸಮಾನವಾಗಿ ಮೀಸಲಾತಿ ಸೌಲಭ್ಯ ದೊರೆಯುವಂತಾಗಲು ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ. 50ಕ್ಕೆ ಹೆಚ್ಚಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ 14 ಸ್ಥಾನ, ವಿಧಾನ ಸಭೆಯಲ್ಲಿ 112 ಸ್ಥಾನ ಮೀಸಲಿಡಬೇಕು.

ಲೋಕಸಭಾ ಚುನಾವಣೆ ಒಳಗೆ ನಮ್ಮ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಯಾವುದೇ ಜನಪ್ರತಿನಿಧಿಗಳನ್ನು ಆಹ್ವಾನಿಸುವುದೇ ಇಲ್ಲ ಎಂದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101, ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ 51 ಸಮುದಾಯಗಳಿವೆ. ಈಗ ಪರಿಶಿಷ್ಟ
ಜಾತಿಯವರಿಗೆ ಶೇ.15, ಪರಿಶಿಷ್ಟ ಪಂಗಡದವರಿಗೆ ಶೇ. 3ರಷ್ಟು ಮೀಸಲಾತಿ ಇದೆ. 152 ಸಮುದಾಯಗಳಿಗೆ ಒಟ್ಟಾರೆ
ಶೇ. 18 ರಷ್ಟು ಮೀಸಲಾತಿ ನೀಡಲಾಗಿದೆ. 

ಶೇ. 18 ರಷ್ಟು ಮೀಸಲಾತಿಯ ಸೌಲಭ್ಯ ಸರಿಯಾಗಿ ಸಿಗುವುದೇ ಇಲ್ಲ. ಬಲಾಡ್ಯ, ಪ್ರಭಾವಿ ಜಾತಿಯವರೇ ಮೀಸಲಾತಿ ಸೌಲಭ್ಯ ಕಬಳಿಸುತ್ತಿದ್ದಾರೆ. ಹೆಚ್ಚುವರಿ ಮೀಸಲಾತಿ ಕೇಳಿದರೆ ಬಲಾಡ್ಯರು ನಮ್ಮ ಜಾತಿಯವರನ್ನು ಮದುವೆ ಆಗುತ್ತೀರಾ ಎಂಬ ಪ್ರಶ್ನೆ ಕೇಳುತ್ತಾರೆ. ವಿವಾಹಗಳು ಅವರವರ ಸಂಪ್ರದಾಯಕ್ಕೆ ಸಂಬಂಧಿಸಿದ್ದು, ವಿವಾಹವಾಗಲಿಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮೀಸಲಾತಿ ಸೌಲಭ್ಯ ನಿರಾಕರಿಸುವುದು ಸರಿಯಲ್ಲ ಎಂದು ಹೇಳಿದರು.

Advertisement

1957 ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಲಾಜಿ ಎಂಬುವರು ಮತ್ತು ಕರ್ನಾಟಕ ವೈದ್ಯಕೀಯ ಮಂಡಳಿ ನಡುವಿನ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳಿಗೆ ಮೀಸಲಾತಿ ಶೇ. 50 ರಷ್ಟು ಮೀರಿರಬಾರದು ಎಂದು ತೀರ್ಪು ನೀಡಿತ್ತು. ಆಗ ಪರಿಶಿಷ್ಟ ಜಾತಿ, ಪಂಗಡದ ಪಟ್ಟಿಯಲ್ಲಿ ಕೇವಲ 40 ಸಮುದಾಯಗಳು ಮಾತ್ರ ಇದ್ದವು. ಈಗ 152 ಸಮುದಾಯಗಳಿವೆ. ಈಗಲೂ ಶೇ. 18 ರಷ್ಟು ಮೀಸಲಾತಿ ಇದೆ. ಸಮುದಾಯಗಳ
ಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬ ಪ್ರಮುಖ ಒತ್ತಾಯದೊಂದಿಗೆ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಬೇಡ ಜಂಗಮ ರಾಜ್ಯ ಅಧ್ಯಕ್ಷ ಡಾ| ಎಂ.ಪಿ. ದಾರಕೇಶಯ್ಯ, ಎನ್‌. ಎಂ. ವೀರೇಶ್‌. ಎಂ. ಸಿದ್ದಲಿಂಗಸ್ವಾಮಿ, ಎಂ.ಎಸ್‌. ಸುಜಾತ, ಎಂ. ಶೈಲಜಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಪಕ್ಷದ ಮುಖಂಡರ ವಿರುದ್ಧವೇ ವಾಗ್ಧಾಳಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಯವರ ಮತಗಳಿಗಾಗಿ ಕಾಂಗ್ರೆಸ್‌ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಅನೇಕ ಸಮುದಾಯಗಳನ್ನು ಸೇರ್ಪಡೆ ಮಾಡಿದೆ. ಸಮುದಾಯಗಳನ್ನು ಕೇವಲ ಮತ ಬ್ಯಾಂಕ್‌ನಂತೆ ಪರಿಗಣಿಸಿತೇ ಹೊರತು ಹೆಚ್ಚುವರಿ ಮೀಸಲಾತಿ ನೀಡಲೇ ಇಲ್ಲ. ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌, ಸಂಸದ ಕೆ.ಎಚ್‌. ಮುನಿಯಪ್ಪ, ಮಾಜಿ ಸಚಿವ ಎಚ್‌. ಆಂಜನೇಯ ಅವರೇ ಮೀಸಲಾತಿ ಸೌಲಭ್ಯ ಕಬಳಿಸುವ ಕೆಲಸ ಮಾಡಿದ್ದಾರೆ. ಆಂಜನೇಯ ಇಡೀ ಸಮುದಾಯವನ್ನು ನಿರ್ನಾಮ ಮಾಡಿದರು. ಈಗಲಾದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ 152 ಸಮುದಾಯಗಳಿಗೆ  ಮಾನವಾಗಿ ಮೀಸಲಾತಿ ಸೌಲಭ್ಯ ದೊರೆಯಲು ಶೇ. 50ರಷ್ಟು ಮೀಸಲಾತಿ ಹೆಚ್ಚಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next