ನವದೆಹಲಿ:ದಿಲ್ಲಿ ಮಹಿಳೆಯರಿಗೆ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಆಮ್ ಆದ್ಮಿ ಪಕ್ಷದ ಸರ್ಕಾರದ ಶಿಫಾರಸ್ಸಿಗೆ ಸುಪ್ರೀಂಕೋರ್ಟ್ ಶುಕ್ರವಾರ ಚಾಟಿ ಬೀಸಿದ್ದು, ಈ ಯೋಜನೆಯಿಂದ ಆರ್ಥಿಕವಾಗಿ ಬೀರುವ ಪರಿಣಾಮಗಳ ಬಗ್ಗೆ ಪ್ರಶ್ನಿಸಿದೆ.
ರಾಜ್ಯ ಸರಕಾರ ಜನಸಾಮಾನ್ಯರ ಹಣವನ್ನು ಉಪಯೋಗಿಸುವಾಗ ತುಂಬಾ ಜಾಗರೂಕತೆ ವಹಿಸಬೇಕೆಂದು ಸಲಹೆ ನೀಡಿರುವ ಸುಪ್ರೀಂಕೋರ್ಟ್, ಇಂತಹ ಉಚಿತ ಸೇವೆಗಳ ಯೋಜನೆಗಳಿಂದ ದಿಲ್ಲಿ ಮೆಟ್ರೋ ರೈಲ್ವೆ ಕಾರ್ಪೋರೇಶನ್ ಗೆ ಭಾರೀ ನಷ್ಟ ತರಲಿದೆ ಎಂದು ತಿಳಿಸಿದೆ.
ದಿಲ್ಲಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂಬ ದಿಲ್ಲಿ ಸರಕಾರದ ಶಿಫಾರಸ್ಸನ್ನು ಪ್ರಶ್ನಿಸಿ ಎಂಸಿ ಮೆಹ್ತಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯವ್ಯಕ್ತಪಡಿಸಿದೆ.
ಸುರಕ್ಷತೆಯ ದೃಷ್ಟಿಯಲ್ಲಿ ಮೆಟ್ರೋ, ಡಿಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಜೂನ್ 3ರಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು.
ಈ ಯೋಜನೆಯನ್ನು 2-3 ತಿಂಗಳಲ್ಲಿನಲ್ಲಿಯೇ ಕಾರ್ಯಗತಗೊಳಿಸುವುದಾಗಿ ತಿಳಿಸಿದ್ದರು. ಅಲ್ಲದೇ ಉಚಿತ ಪ್ರಯಾಣದ ವೆಚ್ಚವನ್ನು ದಿಲ್ಲಿ ಸರಕಾರ ಭರಿಸಲಿದೆ. ಆದರೆ ಕೇಂದ್ರ ಸರಕಾರ ತಮಗೆ ಹಣಕಾಸಿನ ಸಹಕಾರ ನೀಡುತ್ತಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದರು.
ಏತನ್ಮಧ್ಯೆ ಕೇಜ್ರಿವಾಲ್ ಘೋಷಣೆಯನ್ನು ಬಿಜೆಪಿ ಕಟುವಾಗಿ ಟೀಕಿಸಿತ್ತು. ಇದು 2020ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ದೃಷ್ಟಿಕೋನದಿಂದ ಉಚಿತ ಪ್ರಯಾಣದ ಕೇಜ್ರಿವಾಲ್ ಘೋಷಣೆ ಮಾಡಿದ್ದಾಗಿ ಬಿಜೆಪಿ ತಿರುಗೇಟು ನೀಡಿತ್ತು.