Advertisement

ಆಧಾರ್‌: 38 ದಿನಗಳ ವಿಚಾರಣೆ ಬಳಿಕ ತೀರ್ಪು ಕಾದಿರಿಸಿದ ಸುಪ್ರೀಂ

07:44 PM May 10, 2018 | Team Udayavani |

ಹೊಸದಿಲ್ಲಿ : ಕೇಂದ್ರ ಸರಕಾರದ ಅತ್ಯಂತ ಮಹತ್ವದ ಮತ್ತು ದೇಶದ ಏಕೈಕ ಬಯೋಮೆಟ್ರಿಕ್‌ ಗುರುತು ಪತ್ರ ಯೋಜನೆಯಾಗಿರುವ ಆಧಾರ್‌ ಕಾರ್ಡ್‌ ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕಂತೆಯನ್ನು ನಾಲ್ಕು ತಿಂಗಳ ಅವಧಿಯಲ್ಲಿ ಹರಡಿಕೊಂಡ 38 ದಿನಗಳ ಕಾಲ ವಿಚಾರಣೆ ನಡೆಸಿದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ಇಂದು ಗುರುವಾರ ತನ್ನ ತೀರ್ಪನ್ನು ಕಾದಿರಿಸಿತು.

Advertisement

ಆಧಾರ್‌ ಕಾರ್ಯಕ್ರಮಕ್ಕೆ 2016ರಲ್ಲಿ ನೀಡಲಾಗಿದ್ದ ಕಾಯಿದೆ ಸ್ವರೂಪ ಹಾಗೂ ಅದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ದೇಶಾದ್ಯಂತದಿಂದ ಹಲವಾರು ಅರ್ಜಿಗಳು ಸವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲ್ಪಟ್ಟಿದ್ದವು. 

ದೇಶದ ಉನ್ನತ ವಕೀಲರಾಗಿರುವ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ (ಕೇಂದ್ರ ಸರಕಾರದ ವಕೀಲರು), ಹಿರಿಯ ವಕೀಲರಾದ ಕಪಿಲ್‌ ಸಿಬಲ್‌, ಪಿ ಚಿದಂಬರಂ, ರಾಕೇಶ್‌ ದ್ವಿವೇದಿ, ಶ್ಯಾಮ್‌ ದಿವಾನ್‌,ಅರವಿಂದ್‌ ದಾತಾರ್‌ ಮುಂತಾದವರು ವಿವಿಧ ಕಕ್ಷಿದಾರರನ್ನು ಪ್ರತಿನಿಧಿಸಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿದ್ದರು. 

‘ಇಡಿಯ ಜಗತ್ತೇ ವಿದ್ಯುನ್ಮಾನ ಜಾಲಕ್ಕೆ ಒಳಪಟ್ಟಿರುವಾಗ ಮತ್ತು ಈಗಾಗಲೇ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮಾಹಿತಿಗಳು ಜಾಲದಲ್ಲಿ ಉಪಲಬ್ಧವಿರುವಾಗ ಆಧಾರ್‌ ಮಾಹಿತಿಯು ಅದಕ್ಕಿಂತ ಹೇಗೆ ಭಿನ್ನವಾಗಿರಬಲ್ಲುದು’ ಎಂದು ಸುಪ್ರೀಂ ಕೋರ್ಟ್‌ ಪೀಠ ಪ್ರಕರಣದ ವಿಚಾರಣೆಯ ವೇಳೆ  ಆಧಾರ್‌ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿದಾರರನ್ನು ಕೇಳಿತ್ತು. 

ಬ್ಯಾಂಕ್‌ ಖಾತೆ ಸಹಿತ ಸರಕಾರದ ವಿವಿಧ ಜನ ಕಲ್ಯಾಣ ಯೋಜನೆಗಳ ಲಾಭವನ್ನು ಸಾರ್ವಜನಿಕರು ಪಡೆಯುವುದಕ್ಕೆ ಆ ಯೋಜನೆಗಳಿಗೆ ಜನರ ಆಧಾರ್‌ ನಂಬರ್‌ ಜೋಡಿಸುವ ಮಾರ್ಚ್‌ 31, 2018ರ ಗಡುವನ್ನು ಸುಪ್ರೀಂ ಕೋರ್ಟ್‌, ಈ ವಿಷಯದಲ್ಲಿ ತನ್ನ ಅಂತಿಮ ತೀರ್ಪು ಪ್ರಕಟವಾಗುವ ದಿನಾಂಕದ ವರೆಗಿನ ಅನಿರ್ದಿಷ್ಟಾವಧಿಗೆ ವಿಸ್ತರಿಸಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next