ಹೊಸದಿಲ್ಲಿ: ಪಟಾಕಿಗಳ ಮೇಲೆ ದೆಹಲಿ ಸರ್ಕಾರ ವಿಧಿಸಿರುವ ಸಂಪೂರ್ಣ ನಿಷೇಧವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಮನೋಜ್ ತಿವಾರಿ ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಗುರುವಾರ ನಿರಾಕರಿಸಿದೆ.
ದೀಪಾವಳಿಯನ್ನು ಆಚರಿಸಲು ಬೇರೆ ಬೇರೆ ದಾರಿಗಳಿವೆ. ಹಣವನ್ನು ನಿಮ್ಮ ಸಿಹಿತಿಂಡಿಗಳಿಗೆ ಖರ್ಚು ಮಾಡಿ. ಜನರು ನೆಮ್ಮದಿಯಿಂದ ಸ್ವಚ್ಛ ಗಾಳಿಯನ್ನು ಸೇವಿಸುವಂತಾಗಲಿ ಎಂದು ನ್ಯಾ.ಎಂ.ಆರ್. ಶಾ ನೇತೃತ್ವದ ನ್ಯಾಯ ಪೀಠ ಹೇಳಿದೆ.
ಕಳೆಗಳನ್ನು ಸುಡುವುದರಿಂದಲೂ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಆದರೆ, ಹಿಂದೂ ಹಬ್ಬವಾದ ದೀಪಾವಳಿ ಆಚರಿಸುವ ಜನಸಾಮಾನ್ಯರಿಗೆ ಪಟಾಕಿ ವಿಚಾರದಲ್ಲಿ ಕಿರುಕುಳ ನೀಡಲಾಗುತ್ತಿದೆ. ಅವರ ಹಿತದೃಷ್ಟಿಯಿಂದ ಈ ಅರ್ಜಿ ಸಲ್ಲಿಸಿದ್ದೇವೆ ಎಂದು ಅರ್ಜಿದಾರ ತಿವಾರಿ ಪರ ವಕೀಲರಾದ ಶಶಾಂಕ್ ಶೇಖರ್ ವಾದಿಸಿದ್ದರು.
ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್: ಇನ್ನೊಂದೆಡೆ, ಮುಂದಿನ ವರ್ಷದ ಜನವರಿ 1ರವರೆಗೆ ಎಲ್ಲ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹ, ಮಾರಾಟ ಮತ್ತು ಸಿಡಿಸುವಿಕೆಗೆ ಸಂಪೂರ್ಣವಾಗಿ ನಿಷೇಧ ಹೇರುವಂತೆ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಈಗಾಗಲೇ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ, ಪ್ರತ್ಯೇಕ ವಾಗಿ ಸಲ್ಲಿಕೆಯಾಗಿರುವ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾ.ಯಶವಂತ್ ವರ್ಮಾ ಹೇಳಿದ್ದಾರೆ.