Advertisement

ಪ್ರತಿ ಜಿಲ್ಲೆಯಲ್ಲಿ ಪೋಕ್ಸೋ ಕೋರ್ಟ್‌ ಸ್ಥಾಪನೆಗೆ ಆದೇಶ

01:16 AM Jul 26, 2019 | Team Udayavani |

ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ದೇಶದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾ. ದೀಪಕ್‌ ಗುಪ್ತಾ ಹಾಗೂ ನ್ಯಾ. ಅನಿರುದ್ಧ ಬೋಸ್‌ ಅವರುಳ್ಳ ನ್ಯಾಯಪೀಠ ಆದೇಶಿಸಿದೆ. ಜತೆಗೆ, ಈ ನ್ಯಾಯಾಲಯಗಳ ಸ್ಥಾಪನೆಗೆ 60 ದಿನಗಳ ಗಡುವನ್ನೂ ನೀಡಿದೆ.

Advertisement

ಇದೇ ವೇಳೆ, ಪೋಕ್ಸೋ ಪ್ರಕರಣಗಳಿಗೆ ಸಂಬಂಧಪಟ್ಟ ಸ್ಯಾಂಪಲ್ಗಳ ತ್ವರಿತ ಪರೀಕ್ಷೆಗಾಗಿ ಪ್ರತಿ ಜಿಲ್ಲೆಯಲ್ಲೂ ವಿಧಿವಿಜ್ಞಾನ ಕೇಂದ್ರ ಸ್ಥಾಪಿಸುವಂತೆ ಬಂದಿರುವ ಸಲಹೆಯನ್ನು ಆನಂತರ ಚರ್ಚಿಸಲು ಸುಪ್ರೀಂ ಕೋರ್ಟ್‌ ತೀರ್ಮಾನಿಸಿದೆ.

ಸುಪ್ರೀಂ ಹೇಳಿದ್ದೇನು?

•ಯಾವ ಜಿಲ್ಲೆಯಲ್ಲಿ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣಗಳು 100ಕ್ಕಿಂತ ಹೆಚ್ಚು ದಾಖಲಾಗಿವೆಯೋ ಆ ಜಿಲ್ಲೆಗಳಲ್ಲಿ ಪ್ರತ್ಯೇಕ ಪೋಕ್ಸೋ ನ್ಯಾಯಾಲಯ ಸ್ಥಾಪಿಸಬೇಕು.

•ಆದೇಶ ಬಂದ ದಿನದಿಂದ ನ್ಯಾಯಾಲಯದ ಸ್ಥಾಪನೆಗೆ 60 ದಿನಗಳ ಗಡುವು.

Advertisement

•ಈ ನ್ಯಾಯಾಲಯಗಳ ಕೇಂದ್ರ ಸರ್ಕಾರದ ಧನಸಹಾಯದಿಂದ ನಡೆಯಬೇಕಿದ್ದು, ನ್ಯಾಯಾಲಯಕ್ಕೆ ಅಗತ್ಯವಿರುವ ಮೂಲಸೌಕರ್ಯ, ಸಕ್ಷಮ ಅಧಿಕಾರಿ, ಸಹಾಯಕ ಸಿಬ್ಬಂದಿ, ವಿಶೇಷ ಸರ್ಕಾರಿ ವಕೀಲರು, ಇತರೆ ಸಿಬ್ಬಂದಿಗಳ ನೇಮಕಾತಿಯ ಎಲ್ಲಾ ಜವಾಬ್ದಾರಿ ಕೇಂದ್ರದ್ದೇ.

•ಪ್ರತಿಯೊಂದು ನ್ಯಾಯಾಲಯವನ್ನೂ ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನಾಗಿ ರೂಪಿಸಬೇಕು. ತ್ವರಿತ ವಿಚಾರಣೆಗಾಗಿ ಕ್ರಮ ಕೈಗೊಳ್ಳಬೇಕು

•ನ್ಯಾಯಾಲಯದಲ್ಲಿ ಸಲಹೆಗಾರರನ್ನು ಆಯಾ ಜಿಲ್ಲೆಗಳಲ್ಲಿರುವ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ನೇಮಿಸಿ ಕೊಳ್ಳಬೇಕು. ಅವರ ವಿದ್ಯಾರ್ಹತೆ, ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಮಾನಸಿಕ ವಿಷಯಗಳಿಗೆ ಸಂಬಂಧಿಸಿದ್ದಾಗಿರಬೇಕು.

•ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದ ಮಾದರಿಗಳು (ಸ್ಯಾಂಪಲ್ಗಳು) ಬಂದಾಗ ಅವುಗಳ ಸೂಕ್ತ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳು ವಿಳಂಬ ಮಾಡುವ ಹಾಗಿಲ್ಲ.

•ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ಶಿಕ್ಷಾರ್ಹ ಅಪರಾಧವೆಂದು ಟಿವಿಗಳಲ್ಲಿ, ಸಿನಿಮಾ ಮಂದಿರಗಳಲ್ಲಿ ವ್ಯಾಪಕವಾಗಿ ಜಾಹೀರಾತು ಮಾದರಿಯ ಪ್ರಚಾರ ನಡೆಸಬೇಕು. ಪ್ರತಿಯೊಂದು ಜಾಹೀರಾತು ಕ್ಲಿಪ್‌ಗ್ಳ ಅಂತ್ಯದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ನಮೂದಿಸಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next