ಹೊಸದಿಲ್ಲಿ : ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್‌ಗೆ ಜೋಡಿಸುವ ಗಡುವನ್ನು ತನ್ನ ಅಂತಿಮ ತೀರ್ಪು ಪ್ರಕಟವಾಗುವ ವರೆಗಿನ ಅನಿರ್ದಿಷ್ಟಾವಧಿ ಅವಧಿಗೆ ಸುಪ್ರೀಂ ಕೋರ್ಟ್ ಮುಂದೂಡಿದೆ.
ಸುಪ್ರೀಂ ಕೋರ್ಟ್ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಇಂದು ಮಂಗಳವಾರ, “ಸರಕಾರ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡುವಂತಿಲ್ಲ’ ಎಂದು ಹೇಳಿತು.
ವಿಶಿಷ್ಟ ಗುರುತು ಚೀಟಿ ಸಂಖ್ಯೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ಸಮೂಹದ ಮೇಲೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
2018ರ ಮಾರ್ಚ್ 31ರೊಳಗೆ 12 ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯನ್ನು ಜೋಡಿಸುವ ಗಡುವನ್ನು ಸುಪ್ರೀಂ ಕೋರ್ಟ್ ಇಂದು ಅನಿರ್ದಿಷ್ಟಾವಧಿಗೆ ಮುಂದೂಡಿತು.
ಹಾಗಿದ್ದರೂ ಆಧಾರ್ ಸಾಮಾಜಿಕ ಯೋಜನೆಗಳಿಗೆ ಬೇಕೆಂದು ಸುಪ್ರೀಂ ಕೋರ್ಟ್ ಹೇಳಿತು.
2017ರ ಡಿಸೆಂಬರ್ 15ರಂದು ಸುಪ್ರೀಂ ಕೋರ್ಟ್ ಆಧಾರ್ ಜೋಡಣೆ ಗಡುವನ್ನು 2018ರ ಮಾರ್ಚ್ 31ರ ವರೆಗೆ ವಿಸ್ತರಿಸಿತ್ತು.