Advertisement

ಕೆಲವು ವಾಹಿನಿ, ವೆಬ್ ಪೋರ್ಟಲ್ ಗಳಲ್ಲಿ ಹರಡುವ ಸುದ್ದಿಗಳಿಗೆ ನಿಯಂತ್ರಣವೇ ಇಲ್ಲ : ಸುಪ್ರೀಂ

04:48 PM Sep 02, 2021 | Team Udayavani |

ನವ ದೆಹಲಿ : ಕೋಮು ಸೌಹಾರ್ಧವನ್ನು ಕದಡುವಂತಹ ಸುಳ್ಳು ಸುದ್ದಿಗಳನ್ನು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ವೆಬ್ ಪೋರ್ಟಲ್ ಗಳಲ್ಲಿ ಹಬ್ಬಿಸಲಾಗುತ್ತಿದೆ. ಕೆಲವು ಸುದ್ದಿ ವಾಹಿನಿಗಳು  ಪ್ರಸಾರ ಮಾಡುವ ಸುದ್ದಿಗಳಿಗೆ ಕೋಮಿನ ಬಣ್ಣ ಹಚ್ಚುತ್ತಿವೆ ಎಂದು ಸುಪ್ರೀಂ ಕೋರ್ಟ್ ಇಂದು (ಸೆಪ್ಟೆಂಬರ್ 2, ಗುರುವಾರ) ಹೇಳಿದೆ.

Advertisement

ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎನ್‌.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಎ.ಎಸ್‌.ಬೋಪಣ್ಣ ಅವರಿದ್ದ ನ್ಯಾಯಪೀಠ, ಜಮಿಯಾತ್‌ ಉಲೇಮಾ–ಐ–ಹಿಂದ್‌ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡುವ ಸಂದರ್ಭದಲ್ಲಿ ಈ ಕಳವಳವನ್ನು ವ್ಯಕ್ತ ಪಡಿಸಿದೆ.

ಇದನ್ನೂ ಓದಿ : ‘ಅನ್ಸಾರಿ ನಡಿಗೆ ಜನರ ಕಡೆಗೆ’ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ತಡೆ

ಅರ್ಜಿಯಲ್ಲಿ ದೆಹಲಿಯ ಮರ್ಕಜ್‌ ನಿಜಾಮುದ್ದೀನ್‌ ನಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖ ಮಾಡಿತ್ತು.

ಅರ್ಜಿ ವಿಚಾರಣೆ ಮಾಡಿದ ನ್ಯಾಯಪೀಠ, ‘ಕೆಲವು ಖಾಸಗಿ ಸುದ್ದಿ ವಾಹಿನಿಗಳ ಮೂಲಕ ಪ್ರಸಾರವಾಗುತ್ತಿರುವ ಸುದ್ದಿಗಳಿಗೆ ಧಾರ್ಮಿಕ ಬಣ್ಣವನ್ನು ಹಚ್ಚಲಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟಾಗುವುದಕ್ಕೆ ನೇರ ಕಾರಣವಾಗುತ್ತದೆ ಎಂದಿದ್ದಲ್ಲದೇ, ಇಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿರುವ ಸುದ್ದಿ ವಾಹಿನಗಳ ಮೇಲೆ, ಸಾಮಾಜಿಕ ಮಾಧ್ಯಮಗಳು ಹಾಗೂ ವೆಬ್ ಪೋರ್ಟಲ್ ಗಳ ಮೇಲೆ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದೆ.

Advertisement

ಇನ್ನು, ಯಾರೂ ಬೇಕಾದರೂ ಯೂಟ್ಯೂಬ್ ಚಾನೆಲ್ ಗಳನ್ನು ಆರಂಭಿಸಬಹುದಾಗಿದೆ. ಕೆಲವು ಯ್ಯೂಟ್ಯೂಬ್ ಚಾನೆಲ್ ಗಳ ಮೂಲಕ ಪ್ರಸಾರವಾಗುವ ಸುದ್ದಿಗಳಿಗೆ ಯಾವುದೇ ಪುರಾವೆಗಳೇ ಇರುವುದಿಲ್ಲ. ಇಂತಹ ಕೆಲವು ಯೂಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿಗಳಿಗೆ ಯಾವುದೇ ನಿಯಂತ್ರಣವಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧೀಶರು, ಕೋರ್ಟ್ ಗಳ ಬಗ್ಗೆಯೂ ಅವಹೇಳನಕಾರಿಯಾಗಿ ಬರೆಯಲಾಗುತ್ತದೆ. ಸುಳ್ಳು ಸುದ್ದಿಗಳನ್ನು ಹರಡಿಸಲಾಗುತ್ತದೆ. ಇದ್ಯಾವುದಕ್ಕೂ ನಿಯಂತ್ರಣವಿಲ್ಲ ಎಂದಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ದೇಶದ ಹಲವು ಹೈ ಕೋರ್ಟ್ ಗಳಲ್ಲಿ ‘ಸಾಮಾಜಿಕ ಮಾಧ್ಯಮಗಳು, ವೆಬ್‌ ಪೋರ್ಟಲ್‌ ಗಳು ಒಳಗೊಂಡು ಆನ್‌ ಲೈನ್‌ ಪ್ಲಾಟ್ ಫಾರ್ಮ್ ಗಳ ಮೂಲಕ ಪ್ರಸಾರವಾಗುವ ಮಾಹಿತಿ ನಿಯಂತ್ರಣಕ್ಕೆ ರೂಪಿಸಿರುವ ನೂತನ ಮಾಹಿತಿ ಹಾಗೂ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿಸಿದಂತೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ ಗೆ ಈ ಅರ್ಜಿಗಳನ್ನು ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ.

ಸರ್ಕಾರದ ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಆರು ವಾರಗಳ ನಂತರ ವಿಚಾರಣೆ ಮಾಡುವುದಾಗಿ ತಿಳಿಸಿದೆ.

ಇದನ್ನೂ ಓದಿ : ಗ್ಯಾಸ್‌ ದರ 886 ರೂ…ಇದೇ ಮೋದಿ ಅಚ್ಚೇ ದಿನ್‌; ಸಿದ್ದರಾಮಯ್ಯ ವ್ಯಂಗ್ಯ

Advertisement

Udayavani is now on Telegram. Click here to join our channel and stay updated with the latest news.

Next