ನವದೆಹಲಿ: 2017ರಲ್ಲಿ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರನ್ನು ಕೊ*ಲೆಗೈದ ಪ್ರಕರಣದ ಆರೋಪಿ ಮೋಹನ್ ಎನ್ ನಾಯಕ್ ಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ (ಆ.22) ವಜಾಗೊಳಿಸಿದೆ.
ಸುಪ್ರೀಂಕೋರ್ಟ್ ನ ದ್ವಿಸದಸ್ಯ ಪೀಠದ ಜಸ್ಟೀಸ್ ಬೇಲಾ ಎಂ ತ್ರಿವೇದಿ ಮತ್ತು ಜಸ್ಟೀಸ್ ಸತೀಶ್ ಚಂದ್ರ ಶರ್ಮಾ , ಮೋಹನ್ ನಾಯಕ್ ಗೆ ನೀಡಿದ್ದ ಜಾಮೀನು ರದ್ದುಗೊಳಿಸಲು ನಿರಾಕರಿಸಿದ್ದು, ವಿಚಾರಣೆಗೆ ನಾಯಕ್ ಸಹಕರಿಸುತ್ತಿದ್ದು, ಈವರೆಗೂ ಯಾವುದೇ ವಿಚಾರಣೆ ಮುಂದೂಡಿಕೆಗೆ ಮನವಿ ಮಾಡಿಲ್ಲ. ನಾಯಕ್ 2018ರ ಜುಲೈ 18ರಿಂದ ಬಂಧನದಲ್ಲಿರುವುದಾಗಿ ತಿಳಿಸಿದೆ.
ಈ ಹಂತದಲ್ಲಿ ನಾವು ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಪೀಠ ತಿಳಿಸಿದ್ದು, ಏತನ್ಮಧ್ಯೆ ವಿಚಾರಣಾ ಕೋರ್ಟ್ ಆದಷ್ಟು ಶೀಘ್ರವಾಗಿ ವಿಚಾರಣೆ ನಡೆಸಿ, ಮುಕ್ತಾಯಗೊಳಿಸಬೇಕು. ಅಲ್ಲದೇ ವಿಚಾರಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.
ಒಂದು ವೇಳೆ ಆರೋಪಿ ವಿಚಾರಣೆಗೆ ಸಹಕರಿಸದಿದ್ದಲ್ಲಿ, ಅಥವಾ ಪ್ರಕರಣದಲ್ಲಿ ಅನಾವಶ್ಯಕ ಮುಂಡೂಡಿಕೆಯಾಗುತ್ತಿದ್ದರೆ, ಜಾಮೀನು ರದ್ದುಕೋರಿ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಪೀಠ ತಿಳಿಸಿದೆ.
ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಮೋಹನ್ ನಾಯಕ್ ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಹೋದರಿ ಕವಿತಾ ಲಂಕೇಶ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.