Advertisement
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಭಿನ್ನ ಅಭಿಪ್ರಾಯದ ಕಾರಣದಿಂದ ಸದ್ಯ ಕರ್ನಾಟಕದಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ಚಾಲ್ತಿಯಲ್ಲಿರಲಿದೆ. ಇದರ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸುವಂತಿಲ್ಲ. ಶಾಲಾ ಆಡಳಿತವು ಅನುಮೋದಿಸಿದ ಸಮವಸ್ತ್ರವನ್ನು ಮಾತ್ರ ಧರಿಸಬಹುದು ಎಂಬ ತೀರ್ಪು ಮುಂದುವರಿಯಲಿದೆ.
Related Articles
Advertisement
ಆದರೆ ನ್ಯಾ| ಸುಧಾಂಶು ಧುಲಿಯಾ ಅವರು ಹಿಜಾಬ್ ಪರ ಅರ್ಜಿಗಳನ್ನು ಅನುಮೋದಿಸಿದ್ದು, ಕರ್ನಾಟಕ ಹೈಕೋರ್ಟ್ ತೀರ್ಪನ್ನು ರದ್ದು ಮಾಡಿದ್ದಾರೆ. ಇದು ಆಯ್ಕೆಯ ವಿಚಾರವಷ್ಟೇ, ಹೆಚ್ಚೇನೂ ಇಲ್ಲ, ಕಡಿಮೆ ಇಲ್ಲ ಎಂದು ಆದೇಶವನ್ನು ಉಚ್ಚರಿಸುವಾಗ ನ್ಯಾಯಮೂರ್ತಿ ಧುಲಿಯಾ ಹೇಳಿದ್ದಾರೆ.
“ಇದು ಅಂತಿಮವಾಗಿ ಆಯ್ಕೆಯ ವಿಷಯವಾಗಿದೆ, ಬೇರೇನೂ ಅಲ್ಲ. ನನ್ನ ಮನಸ್ಸಿನಲ್ಲಿ ಮುಖ್ಯವಾಗಿ ಹೆಣ್ಣು ಮಗುವಿನ ಶಿಕ್ಷಣವಾಗಿತ್ತು. ಹೀಗಾಗಿ ನನ್ನ ಸಹೋದರ ನ್ಯಾಯಾಧೀಶರ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ” ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು.
ದ್ವಿಸದಸ್ಯ ಪೀಠದ ಭಿನ್ನ ಅಭಿಪ್ರಾಯಗಳ ಕಾರಣದಿಂದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಈ ವಿಷಯವನ್ನು ಸೂಕ್ತ ನಿರ್ದೇಶನಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಉಲ್ಲೇಖಿಸಲಾಗಿದೆ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹೇಳಿದ್ದಾರೆ.
ಎಲ್ಲಿಂದ ಆರಂಭ: ಕಳೆದ ಜನವರಿಯಲ್ಲಿ ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ಆರು ವಿದ್ಯಾರ್ಥಿನಿಯರನ್ನು ಪ್ರವೇಶಿಸದಂತೆ ತಡೆದಾಗ ಈ ಹಿಜಾಬ್ ಗಲಾಟೆ ಆರಂಭವಾಗಿತ್ತು. ಪ್ರವೇಶ ತಡೆದ ಕಾರಣಕ್ಕೆ ವಿದ್ಯಾರ್ಥಿಗಳು ಕಾಲೇಜಿನೆದುರು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ತಿರುಗೇಟು ಎಂಬಂತೆ ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲು ಹುಡುಗರು- ಹುಡುಗಿಯರು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಿದ್ದರು. ಉಡುಪಿಯಿಂದ ಹೊರಗೂ ಕಾಲಿಟ್ಟ ಹಿಜಾಬ್ ವಿವಾದ ಕರ್ನಾಟದ ಇತರ ಜಿಲ್ಲೆಗಳಲ್ಲೂ ಧ್ವನಿಸಿತ್ತು.
ಇದರ ಪರಿಣಾಮ ತಜ್ಞರ ಸಮಿತಿ ನಿರ್ಧಾರ ಮಾಡುವವರೆಗೂ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲನ್ನು ನಿಷೇಧ ಮಾಡಿದ ಕರ್ನಾಟಕ ಸರ್ಕಾರವು, ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದಿತ್ತು.
ಇದನ್ನೂ ಓದಿ:ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್?: ವಿಭಿನ್ನ ತೀರ್ಪು ನೀಡಿದ ಸುಪ್ರೀಂ ನ್ಯಾಯಮೂರ್ತಿಗಳು
ಫೆಬ್ರವರಿ 5 ರಂದು, ಸುತ್ತೋಲೆ ಬಿಡುಗಡೆ ಮಾಡಿದ ಶಿಕ್ಷಣ ಮಂಡಳಿಯು, ವಿದ್ಯಾರ್ಥಿಗಳು ಶಾಲಾ ಆಡಳಿತವು ಅನುಮೋದಿಸಿದ ಸಮವಸ್ತ್ರವನ್ನು ಮಾತ್ರ ಧರಿಸಬಹುದು ಮತ್ತು ಇತರ ಯಾವುದೇ ಧಾರ್ಮಿಕ ಉಡುಪುಗಳನ್ನು ಕಾಲೇಜುಗಳಲ್ಲಿ ಅನುಮತಿಸಲಾಗುವುದಿಲ್ಲ ಎಂದು ತಿಳಿಸಿತು. ಇದರ ವಿರುದ್ಧ ಹಲವಾರು ಅರ್ಜಿಗಳನ್ನು ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿತ್ತು.
ಸತತ ವಿಚಾರಣೆ ಮಾಡಿದ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು, ಸರ್ಕಾರದ ಸಮವಸ್ತ್ರದ ನೀತಿ ಸಮಂಜಸವಾಗಿದ್ದು, ವಿದ್ಯಾರ್ಥಿಗಳು ಆಕ್ಷೇಪಿಸುವಂತಿಲ್ಲ ಎಂದಿತ್ತು. ಅಲ್ಲದೆ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು.