ನವದೆಹಲಿ: ಯಾವುದೇ ರಾಜ್ಯವು ತನ್ನ ನೆಲದಲ್ಲಿ ಬೇರೊಂದು ರಾಜ್ಯ ನಡೆಸುವಂಥ ಲಾಟರಿಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ಹೊಂದಿದೆ ಎಂಬ ತನ್ನ ತೀರ್ಪುನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಮೂಲಕ ಇಂಥ ಲಾಟರಿಗಳ ಮೇಲೆ ತೆರಿಗೆ ವಿಧಿಸಿ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಅಂಗೀಕರಿಸಿರುವ ಕಾನೂನುಗಳನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮೇಘಾಲಯ, ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳು ಕರ್ನಾಟಕ ಹಾಗೂ ಕೇರಳದಲ್ಲಿ ನಡೆಸುತ್ತಿರುವಂಥ ಲಾಟರಿಗಳಿಗೆ ತೆರಿಗೆ ವಿಧಿಸುವ ಶಾಸನಾತ್ಮಕ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ ಎಂದು ಎರಡೂ ರಾಜ್ಯಗಳ ಹೈಕೋರ್ಟ್‌ಗಳು ತೀರ್ಪು ನೀಡಿದ್ದವು.
ಜತೆಗೆ, ತೆರಿಗೆ ರೂಪದಲ್ಲಿ ಪಡೆದಿದ್ದ ಹಣವನ್ನು ಆಯಾ ರಾಜ್ಯಗಳಿಗೆ ಹಿಂದಿರುಗಿಸುವಂತೆಯೂ ಆದೇಶಿಸಿದ್ದವು. ಇದನ್ನು ಪ್ರಶ್ನಿಸಿ ಎರಡೂ ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಸುಪ್ರೀಂನ ನ್ಯಾ.ಎಂ.ಆರ್.ಶಾ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಕಳೆದ ಮಾ.23ರಂದು ಈ ಅರ್ಜಿಗಳನ್ನು ಪುರಸ್ಕರಿಸಿತ್ತು.
ನಾವು ವಿಧಿಸುತ್ತಿರುವ ತೆರಿಗೆಯು ಲಾಟರಿ ಟಿಕೆಟ್‌ಗಳ ಮಾರಾಟದ ಮೇಲಿನ ತೆರಿಗೆಯಾಗಲೀ, ಲಾಟರಿಗಳ ಮೇಲಾಗಲೀ ಅಲ್ಲ. ಇದು ಜೂಜಿನ ಮೇಲೆ ವಿಧಿಸಲಾಗುತ್ತಿರುವ ತೆರಿಗೆ ಎಂದು ಕರ್ನಾಟಕ ಸರ್ಕಾರ ವಾದಿಸಿತ್ತು. ಇದನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಬೇರೆ ರಾಜ್ಯಗಳು ತನ್ನ ನೆಲದಲ್ಲಿ ನಡೆಸುವ ಲಾಟರಿಗಳಿಗೆ ತೆರಿಗೆ ವಿಧಿಸುವ ಅಧಿಕಾರ ಆಯಾ ರಾಜ್ಯಗಳಿಗೆ ಇರುತ್ತದೆ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಮೇಘಾಲಯ ಸರ್ಕಾರ, ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿತ್ತು. ಈಗ ಸುಪ್ರೀಂ ಕೋರ್ಟ್ ಈ ಮರುಪರಿಶೀಲನಾ ಅರ್ಜಿಯನ್ನು ತಳ್ಳಿಹಾಕಿದೆ.