ಹೊಸದಿಲ್ಲಿ : ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯವನ್ನು ಪೊಲೀಸರು ಬೂಟು ಧರಿಸಿ ಶಸ್ತ್ರ ಸಜ್ಜಿತರಾಗಿ ಪ್ರವೇಶಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.
ಈ ಬಗ್ಗೆ ಮುಂದಿನ ಎರಡು ವಾರಗಳ ಒಳಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಒಡಿಶಾ ಸರಕಾರವನ್ನು ಕೇಳಿಕೊಂಡಿದೆ.
ಪುರಿ ದೇಗುಲದೊಳಗೆ ಭಕ್ತರಿಗೆ ಕ್ಯೂ ವ್ಯವಸ್ಥೆ ಕಡ್ಡಾಯಗೊಳಿಸಿರುವುದರ ವಿರುದ್ಧ ಈಚೆಗೆ ಭುಗಿಲೆದ್ದಿದ್ದ ಹಿಂಸಾ ಪ್ರಕರಣವನ್ನು ಕೂಡ ಸುಪ್ರೀಂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿದೆ.
ಕಳೆದ ವಾರ ಶ್ರೀ ಜಗನ್ನಾಥ ಸೇನಾ ಸದಸ್ಯರು ಮತ್ತು ಕೆಲವು ಭಕ್ತರು ಕ್ಯೂ ಪದ್ಧತಿ ವಿರೋಧಿಸಿ ಪುರಿ ದೇವಾಲಯದೊಳಗೆ ಧಾಂಧಲೆ ನಡೆಸಿ ಅಲ್ಲಿನ ಸೊತ್ತುಗಳನ್ನು ಹಾನಿಗೊಳಿಸಿದ್ದರು. ಹಾಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವುದಕ್ಕಾಗಿ ಪೊಲೀಸರು ದೇವಾಲಯ ಸಮೀಪ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ.144 ಜಾರಿ ಮಾಡಿದ್ದರು.
ಜಗನ್ನಾಥ ದೇವಾಲಯವನ್ನು ಪ್ರವೇಶಿಸುವ ಭಕ್ತರಿಗೆ ಕ್ಯೂ ಪದ್ಧತಿಯನ್ನು ಜಾರಿಗೊಳಿಸಲಾದುದನ್ನು ಪ್ರತಿಭಟಿಸಿ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆ ನಡೆಸಿದ್ದ 12 ತಾಸು ಬಂದ್ ವೇಳೆ ಹಿಂಸೆ ಭುಗಿಲೆದ್ದಿತ್ತು. ಪರಿಣಾಮವಾಗಿ ಕನಿಷ್ಠ 9 ಮಂದಿ ಪೊಲೀಸರು ಗಾಯಗೊಂಡಿದ್ದರು.