Advertisement

ತಮಿಳುನಾಡಿಗೆ ನೀರು ಬಿಡಿ : ಕೇಂದ್ರಕ್ಕೆ ಸುಪ್ರೀಂ ಖಡಕ್‌ ಆದೇಶ

05:20 AM May 04, 2018 | Team Udayavani |

ಹೊಸದಿಲ್ಲಿ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸ್ಕೀಮ್‌ ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮುಂದಿನ ಮಂಗಳವಾರದ ಒಳಗೆ ವಿವರಣೆ ನೀಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಗಡುವು ನೀಡಿದೆ. ಇದೇ ವೇಳೆ, ತಮಿಳುನಾಡಿಗೆ ಹೆಚ್ಚುವರಿ ಎರಡು ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರಕ್ಕೆ ಆದೇಶಿಸಿದೆ. ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಸ್ಕೀಮ್‌ ರಚನೆಗೆ ಕೋರ್ಟ್‌ ನೀಡಿದ್ದ ಕಾಲಾವಧಿ ಗುರುವಾರಕ್ಕೆ ಮುಗಿದ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್‌ ಕೆ.ಕೆ. ವೇಣು ಗೋಪಾಲ್‌ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯದವರೆಗೆ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠಕ್ಕೆ ಅರಿಕೆ ಮಾಡಿಕೊಂಡರು.

Advertisement

ಪ್ರಧಾನಿ ಮೋದಿ ಮತ್ತು ಕೇಂದ್ರದ ಇತರ ಸಚಿವರು ಕರ್ನಾಟಕ ಪ್ರವಾಸದಲ್ಲಿದ್ದಾರೆ. ಕರಡು ಕೇಂದ್ರ ಸಂಪುಟದ ಅಂಗೀಕಾರಕ್ಕೆ ಬಾಕಿ ಇದೆ. ಹೀಗಾಗಿ ಚುನಾವಣೆ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದೂ ಮನವಿ ಮಾಡಿದರು. ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಿಜೆಐ ಮಿಶ್ರಾ, ‘ಈ ದಿನವೇ ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಎಂಬಿ)ರಚನೆ ಬಗ್ಗೆ ಕರಡು ನಿರ್ಣಯ ಸಲ್ಲಿಸಬೇಕಾಗಿತ್ತಲ್ಲವೇ’ ಎಂದು ಪ್ರಶ್ನಿಸಿದರು. ಅದಕ್ಕೆ, ಅಟಾರ್ನಿ ಜನರಲ್‌ “ಕೇಂದ್ರ ಸರಕಾರಕ್ಕೆ ಇನ್ನು 10 ದಿನ ಅವಕಾಶ ಕೊಡಿ. ನಾವು ಇಕ್ಕಟ್ಟಿನಲ್ಲಿದ್ದೇವೆ’ ಎಂದು ಮನವಿ ಮಾಡಿದರು. 

ಪ್ರತಿಕ್ರಿಯಿಸಿದ ನ್ಯಾಯಪೀಠವು ಮಂಗಳವಾರದ (ಮೇ 8) ಒಳಗಾಗಿ ಸ್ಕೀಮ್‌ ರಚನೆ ಕುರಿತು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿದರು. ಜತೆಗೆ ಕರ್ನಾಟಕ ಸರಕಾರ ತಮಿಳುನಾಡಿಗೆ 4 ಟಿಎಂಸಿ ನೀರು ಬಿಡಬೇಕು ಎಂದಿತು. ಬಳಿಕ 2 ಟಿಎಂಸಿ ನೀರು ಬಿಡಿ ಎಂದ ಕೋರ್ಟ್‌, ಕೊನೆಯದಾಗಿ ಅಣೆಕಟ್ಟಿನಲ್ಲಿ ಎಷ್ಟು ಪ್ರಮಾಣದ ನೀರು ಇದೆ ಎನ್ನುವುದರ ಬಗ್ಗೆ ಮಾಹಿತಿ ನೀಡುವಂತೆ ಹೇಳಿ, ಎಷ್ಟು ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲು ಸಾಧ್ಯವೆಂದು ತಿಳಿಸುವಂತೆ ಸೂಚಿಸಿತು.

ತಮಿಳುನಾಡು ವಾದಿಸಿದ್ದೇನು?
ತಮಿಳುನಾಡು ಪರ ವಕೀಲ ಶೇಖರ್‌ ನಾಫ್ಡೆ ವಾದ ಮಂಡಿಸಿ, ಕೇಂದ್ರ ಸರಕಾರ ಸಿಎಂಬಿ ರಚಿಸುವ ಕರಡು ನಿಯಮಗಳನ್ನು ಕೋರ್ಟ್‌ಗೆ ಸಲ್ಲಿಸದಿರುವ ಬಗ್ಗೆ ಆಕ್ಷೇಪಿಸಿದರು. ಜಲ ನಿರ್ವಹಣ ಮಂಡಳಿ ರಚಿಸದೆ ಕೇಂದ್ರ ಸರಕಾರ ಕರ್ನಾಟಕದ ಪರ ವಕಾಲತ್ತು ವಹಿಸುವಂತೆ ಕಾಣುತ್ತಿದೆ. ತಮಿಳುನಾಡಿನಲ್ಲಿ ನೀರಿನ ಕೊರತೆ ತೀವ್ರವಾಗಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯ ಪೀಠವು ಕೂಡಲೇ ತಮಿಳುನಾಡಿಗೆ 2 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿತು. ತಪ್ಪಿದರೆ ಗಂಭೀರ ಪರಿಣಾಮ ಎದುರಿಸಬೇಕು ಎಂದಿತು.

ಮುಂದೇನು?
– ಕರ್ನಾಟಕದ ಪಾಲಿಗೆ ಅತ್ಯಂತ ಸಂದಿಗ್ಧ ಸ್ಥಿತಿ.
– ಸುಪ್ರೀಂ ಆದೇಶದಂತೆ ನೀರು ಬಿಡಲೇ ಬೇಕು.
–  ಗಂಭೀರ ಸ್ಥಿತಿ ಇದ್ದಲ್ಲಿ ತೀರ್ಪು ಮಾರ್ಪಾಡಿಗೆ ಅರ್ಜಿ ಸಲ್ಲಿಸಬಹುದು.
– ಆದೇಶ ಮಾರ್ಪಾಡಾಗುವ ಸಾಧ್ಯತೆ ತೀರಾ ಕಡಿಮೆ.
– ಕಾವೇರಿ ಜಲ ನಿರ್ವಹಣ ಮಂಡಳಿ ರಚನೆ ಆಗಲೇಬೇಕು, ಆದರೆ, ಅವರೇ ನೀರು ಬಿಡುತ್ತಾರೆ.

Advertisement

ನಮ್ಮಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿಯಿದೆ. ಹೀಗಿದ್ದಾಗ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ. ಕಾನೂನು ತಜ್ಞರೊಂದಿಗೆ ಸುಪ್ರೀಂಕೋರ್ಟ್‌ ಆದೇಶ ಜಾರಿಗೊಳಿಸುವ ಕುರಿತು ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಈ ಹಿಂದೆ ಗಡುವು ನೀಡಿದ್ದ ಸುಪ್ರೀಂಕೋರ್ಟ್‌ ನಿಂದ ಪೂರಕ ತೀರ್ಪು ಹೊರಬರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ನಮ್ಮ ಜಲಾಶಯಗಳಲ್ಲೇ ನೀರಿನ ಕೊರತೆ ಇದ್ದು, ಬೆಂಗಳೂರು ಸೇರಿ ಎಷ್ಟೋ ಕಡೆ ಕುಡಿಯಲು ನೀರಿಲ್ಲದೇ ಇರುವಾಗ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ?
– ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ

ಕಾವೇರಿ ಜಲಾನಯನ ಪ್ರದೇಶದಲ್ಲಿನ ರಾಜ್ಯದ 4 ಜಲಾಶಯಗಳಲ್ಲಿ ಕೇವಲ 9 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ನಮಗೆ ಕುಡಿಯಲು ಸಾಕಾಗುತ್ತಿಲ್ಲ. ಹೀಗಾಗಿ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ. ಸುಪ್ರೀಂಕೋರ್ಟ್‌ ಯಾವ ಅಂಶಗಳ ಆಧಾರದಲ್ಲಿ ಈ ನಿರ್ದೇಶನ ನೀಡಿದೆಯೋ ತಿಳಿಯದು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನು ತಜ್ಞರಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗುವುದು.
– ಡಾ| ಎಂ.ಬಿ.ಪಾಟೀಲ, ಜಲಸಂಪನ್ಮೂಲ ಸಚಿವ

ಸು.ಕೋರ್ಟ್‌ ಆದೇಶ ಪಾಲನೆ ಮಾಡದೆ ಬೇರೆ ದಾರಿಯೇ ಇಲ್ಲ. ಹಾಗೊಂದು ವೇಳೆ ನಮ್ಮ ರಾಜ್ಯದಲ್ಲಿ ನೀರಿನ ಸ್ಥಿತಿ ತೀರಾ ಗಂಭೀರವಾಗಿದ್ದರೆ, ತೀರ್ಪು ಮಾರ್ಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆದರೆ ತೀರ್ಪು ಕೊಡುವ ಮೊದಲು ಎಲ್ಲ ಸಾಧಕ – ಬಾಧಕ ಮತ್ತು ನೀರಿನ ವಸ್ತುಸ್ಥಿತಿ ಪರಿಗಣಿಸಲಾಗಿರುತ್ತದೆ. ಹಾಗಾಗಿ ತೀರ್ಪು ನೀಡುವ ಸಾಧ್ಯತೆ ತೀರಾ ವಿರಳ. 
– ಅಶೋಕ ಹಾರನಹಳ್ಳಿ, ಮಾಜಿ ಅಡ್ವೊಕೇಟ್‌ ಜನರಲ್‌

Advertisement

Udayavani is now on Telegram. Click here to join our channel and stay updated with the latest news.

Next