ಹೊಸದಿಲ್ಲಿ : ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿಯವರ ಹತ್ಯೆಯ ತನಿಖೆಯನ್ನು ಪುನರಾರಂಭಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಮೇಲಿನ ವಿಚಾರಣೆಯನ್ನು ಇಂದು ಶುಕ್ರವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಕೆಲವೊಂದು ಶೋಧಕ ಪ್ರಶ್ನೆಗಳನ್ನು ಮುಂದಿರಿಸಿತು.
ಸುಮಾರು ಹದಿನೈದು ನಿಮಿಷಗಳ ಕಾಲ ನಡೆದ ವಿಚಾರಣೆಯ ಬಳಿಕ ಜಸ್ಟಿಸ್ ಎಸ್ ಎ ಬೋಬಡೆ ಮತ್ತು ಜಸ್ಟಿಸ್ ಎಲ್ ನಾಗೇಶ್ವರ ರಾವ್ ಅವರನ್ನು ಒಳಗೊಂಡ ಪೀಠ, ಗಾಂಧಿ ಹತ್ಯೆ ಪುನರ್ ತನಿಖೆ ವಿಷಯದಲ್ಲಿ ನ್ಯಾಯಾಲಯದ ಮಾರ್ಗದರ್ಶಿ (ಅಮಿಕಸ್ ಕ್ಯೂರಿ) ಯಾಗಿ ಹಿರಿಯ ವಕೀಲ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮರೇಂದ್ರ ಶರಣ್ ಅವರನ್ನು ನೇಮಿಸಿತು.
ಬಹಳ ಹಿಂದೆಯೇ ತನಿಖೆ, ವಿಚಾರಣೆ ನಡೆದು ತೀರ್ಪಾಗಿರುವ ಮಹಾತ್ಮಾ ಗಾಂಧಿ ಹತ್ಯೆ ಕೇಸಿನಲ್ಲಿ ಕಾನೂನು ಈಗ ಏನೂ ಮಾಡುವಂತಿಲ್ಲ ಎಂದು ಹೇಳಿದ ಪೀಠ, ಕೋರ್ಟ್ ಮಾರ್ಗದರ್ಶಿಯಾಗಿ ನೇಮಿಸಲಾಗಿರುವ ಶರಣ್ ಅವರ ಅವಲೋಕನ ವರದಿಗೆ ನ್ಯಾಯಾಲಯಕ್ಕೆ ಯಾವುದೇ ಬದ್ಧತೆ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿತಲ್ಲದೆ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ನಿಗದಿಸಿತು.
ಇತಿಹಾಸದಲ್ಲಿ ದೊಡ್ಡ ಮಟ್ಟದಲ್ಲಿ ಮುಚ್ಚಿ ಹಾಕಲ್ಪಟ್ಟಿರುವ ಗಾಂಧಿ ಹತ್ಯೆಯನ್ನು ಅನೇಕ ಕಾರಣಗಳಿಗಾಗಿ ಪುನರಾರಂಭಿಸುವ ಅಗತ್ಯವಿದೆ ಎಂದು ಕೋರಿ ಮುಂಬಯಿಯಲ್ಲಿ ನೆಲೆಗೊಂಡಿರುವ ಸಂಶೋಧಕ ಹಾಗೂ ಅಭಿನವ್ ಭಾರತ್‌ನ ಓರ್ವ ಟ್ರಸ್ಟಿಯಾಗಿರುವ ಪಂಕಜ್ ಫಡ್‌ನಿಸ್ ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಮಹಾತ್ಮಾ ಗಾಂಧಿ ಅವರನ್ನು 1948ರ ಜನವರಿ 30ರಂದು ಹೊಸದಿಲ್ಲಿಯಲ್ಲಿ ಹಿಂದೂ ಬಲಪಂಥೀಯ ರಾಷ್ಟ್ರೀಯ ವಾದಿ ನತ್ತೂರಾಮ್ ವಿನಾಯಕ್ ಗೋಡ್ಸೆ, ಅತ್ಯಂತ ಹತ್ತಿರದಿಂದ ಗುಂಡೆಸದು ಕೊಂದಿರುವುದು ಇತಿಹಾಸಕ್ಕೆ ಸೇರಿಹೋಗಿರುವ ಸಂಗತಿಯಾಗಿದೆ.