ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸಿ ಹಾಗೂ ಈ 2 ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಠೇವಣಿಗಳನ್ನು ಹೂಡಿಕೆ ಮಾಡಬಾರದು ಎಂದು ಆಗಸ್ಟ್ 12ರಂದು ಹೊರಡಿಸಿದ್ದ ಸುತ್ತೋಲೆಯನ್ನು 15 ದಿನಗಳವರೆಗೆ ತಾತ್ಕಾಲಿಕವಾಗಿ ತಡೆ ಹಿಡಿದು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ವಿಚಾರವಾಗಿ ಎಸ್‌ಬಿಐ ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿನೋದ್ ಜೈಸ್ವಾಲ್ 15 ದಿನಗಳ ಕಾಲಾವಕಾಶ ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ. ಅಲ್ಲದೆ, ಆಗಸ್ಟ್ 16ರಂದು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಶ್ಚಿತ ಠೇವಣಿಯಲ್ಲಿ ಹೂಡಿರುವ ಹಣವನ್ನು ಮರುಪಾವತಿಸುವ ವಿಷಯವನ್ನು ಇತ್ಯರ್ಥಗೊಳಿಸಲು ಮನವಿ ಮಾಡಿರುತ್ತಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅವೆನ್ಯೂ ರಸ್ತೆ ಶಾಖೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ 2013ರಲ್ಲಿ ಇಟ್ಟಿದ್ದ 10 ಕೋಟಿ ರೂ. ನಿಶ್ಚಿತ ಠೇವಣಿ ಅವಧಿ ಮುಕ್ತಾಯಗೊಳ್ಳುವುದಕ್ಕೆ ಮುನ್ನವೇ ನಕಲಿ ದಾಖಲೆ ಆಧಾರದ ಮೇಲೆ ಖಾಸಗಿ ಕಂಪನಿಯ ಸಾಲಕ್ಕೆ ಹೊಂದಾಣಿಕೆ ಮಾಡಲಾಗಿತ್ತು.
ಅದೇ ರೀತಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ ದೀಪಕ್ ಕುಮಾರ್ ಶ್ರೀವಾತ್ಸವ 15 ದಿನಗಳ ಕಾಲಾವಕಾಶ ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಆಗಸ್ಟ್ 16ರಂದು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಕೆಐಎಡಿಬಿ ಸಂಸ್ಥೆಯ ನಿಶ್ಚಿತ ಠೇವಣಿಯಲ್ಲಿ ಹೂಡಿರುವ ಹಣವನ್ನು ಮರುಪಾವತಿಸುವ ವಿಷಯವನ್ನು ಇತ್ಯರ್ಥಗೊಳಿಸಲು ಮನವಿ ಮಾಡಿರುತ್ತಾರೆ.
2011ರಲ್ಲಿ ರಾಜಾಜಿನಗರದ ಪಂಜಾಬ್ ನ್ಯಾಶನಲ್ ಬ್ಯಾಂಕ್ ಶಾಖೆಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮ (ಕೆ ಐಎಡಿಬಿ) 25 ಕೋಟಿ ರೂ.ನ್ನು ಚೆಕ್ ಮೂಲಕ ಎರಡು ಪ್ರತ್ಯೇಕ ನಿಶ್ಚಿತ ಠೇವಣಿ ಇಟ್ಟಿತ್ತು. ಅವಧಿ ಮುಕ್ತಾಯಗೊಂಡ ನಂತರ 13 ಕೋಟಿ ರೂ.ನ ಒಂದು ಠೇವಣಿ ನಗದಯ್ತು. ಆದರೆ ಎರಡನೇ ಖಾತೆಯ 12 ಕೋಟಿ ರೂ. ಬಗ್ಗೆ ಮಾಹಿತಿ ಇರಲಿಲ್ಲ.
ಎಸ್‌ಬಿಐ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಕೋರಿಕೆ ಹಿನ್ನೆಲೆಯಲ್ಲಿ ಈ ಬ್ಯಾಂಕುಗಳಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸಿ ಹಾಗೂ ಈ ಎರಡು ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಠೇವಣಿಗಳನ್ನು ಹೂಡಿಕೆ ಮಾಡಬಾರದು ಎಂದು ಆಗಸ್ಟ್ 12ರಂದು ಹೊರಡಿಸಿದ್ದ ಸುತ್ತೋಲೆಯನ್ನು 15 ದಿನಗಳವರೆಗೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್ ಆಗಸ್ಟ್ 16 (ಶುಕ್ರವಾರ) ಸುತ್ತೋಲೆ ಹೊರಡಿಸಿದ್ದಾರೆ.