ಹೈದರಾಬಾದ್: ಸ್ಟೇಟ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 19 ವರ್ಷದ ಯುವತಿಯನ್ನು ಮಾಜಿ ಪ್ರಿಯಕರ ಹತ್ಯೆಗೈದು ನಂತರ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ಆಂಧ್ರಪ್ರದೇಶದ ಅನಂತಪುರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುವತಿ ಮತ್ತೊಬ್ಬ ಯುವಕನ ಜತೆ ಸಂಬಂಧ ಹೊಂದಿರುವುದಕ್ಕೆ ಆಕ್ರೋಶಗೊಂಡು ಈ ಕೃತ್ಯ ಎಸಗಿರುವುದಾಗಿ ಬಂಧಿತ ಯುವಕ ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಗೂಟೈ ರಾಜೇಶ್ ಜತೆ ಸ್ನೇಹಲತಾ ಗೆಳೆತನ ಹೊಂದಿದ್ದಳು. ರಾಜೇಶ್ ಗಾರೆಕೆಲಸ ಮಾಡುತ್ತಿದ್ದ. ಆದರೆ ಬ್ಯಾಂಕ್ ನಲ್ಲಿ ಗುತ್ತಿಗೆ ಆಧಾರಿತ ಕೆಲಸ ಸಿಕ್ಕಿದ ನಂತರ ಸ್ನೇಹಲತಾ ರಾಜೇಶ್ ನಿಂದ ಅಂತರ ಕಾಯ್ದುಕೊಂಡಿದ್ದಳು.
ರಾಜೇಶ್ ಸ್ನೇಹ ಬಿಟ್ಟ ಸ್ನೇಹಲತಾ ಕಾಲೇಜ್ ಕ್ಲಾಸ್ ಮೇಟ್ ಜತೆ ಹೆಚ್ಚು ಸುತ್ತಾಡತೊಡಗಿದ್ದಳು. ಇದರಿಂದ ರಾಜೇಶ್ ಅಸಮಾಧಾನಗೊಂಡಿದ್ದು, ಸ್ನೇಹಲತಾಳನ್ನು ಕೊಲ್ಲುವ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಸ್ನೇಹಲತಾ ಮತ್ತು ರಾಜೇಶ್ 1,618 ಬಾರಿ ಕರೆ ಮಾತನಾಡಿರುವುದು ಮೊಬೈಲ್ ಕಾಲ್ ರೆಕಾರ್ಡ್ಸ್ ಮೂಲಕ ಬಯಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸ್ನೇಹಲತಾಗೆ ಕರೆ ಮಾಡಿ ಮಾತನಾಡಲು ಇದೆ ಎಂದು ಹೇಳಿ ಬೈಕ್ ನಲ್ಲಿ ಕರೆದೊಯ್ದಿದ್ದ. ನಂತರ ಕ್ಲಾಸ್ ಮೇಟ್ ಜತೆಗಿನ ಸ್ನೇಹದ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
ಅನಂತಪುರದ ಬದನಪಲ್ಲಿ ಗದ್ದೆ ಪ್ರದೇಶದಲ್ಲಿ ಆಕೆಯ ಉಸಿರುಗಟ್ಟಿಸಿ ಸಾಯಿಸಿದ್ದು, ನಂತರ ಆಕೆಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಬಾರದು ಎಂದು ಬ್ಯಾಂಕ್ ಗೆ ಸಂಬಂಧಪಟ್ಟ ದಾಖಲೆಗಳನ್ನು ಹರಿದು ಆಕೆಯ ಮೈಮೇಲೆ ಹಾಕಿ ಬೆಂಕಿಹಚ್ಚಿ ಸುಟ್ಟಿದ್ದ. ಆಕೆಯ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಬಿ.ಸತ್ಯ ಯೇಸು ಬಾಬು ತಿಳಿಸಿದ್ದಾರೆ.