ಕೋಲ್ಕತ್ತಾ: ದೇಶದ ಕೃಷಿಕ ಸಮುದಾಯದಲ್ಲೂ ಕ್ರೆಡಿಟ್ ಸಂಸ್ಕೃತಿಯನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ರೈತರಿಗೂ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲು ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಮುಂದಾಗಿದೆ. ತನ್ನ ಅಧೀನಸಂಸ್ಥೆಯಾದ ಎಸ್‌ಬಿಐ ಕಾರ್ಡ್ಸ್ ಆ್ಯಂಡ್ ಪೇಮೇಂಟ್ಸ್ ಸರ್ವೀಸ್ ಮೂಲಕ ರೈತರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಎಸ್‌ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸಿಗೂ ಇದು ಪೂರಕವಾಗಿರಲಿದೆ.
ಕೋಲ್ಕತ್ತಾದಲ್ಲಿ ಮಂಗಳವಾರ ಪೂರ್ತಿ ಫಾರ್ಮ್ಕಾರ್ಟ್ ಮತ್ತು ಡೀಲರ್ ಬಂಧು ಆ್ಯಪ್ ಅನಾವರಣ ಸಮಾರಂಭ ದಲ್ಲಿ ಮಾತನಾಡಿರುವ ರಜನೀಶ್ ಕುಮಾರ್, “ಈಗಾಗಲೇ ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿದೆ. ಇದರ ಯಶಸ್ಸಿನ ಆಧಾರದಲ್ಲಿ ದೇಶಾದ್ಯಂತ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು’ ಎಂದಿದ್ದಾರೆ.
40 ದಿನಗಳ ಕ್ರೆಡಿಟ್: ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳು ರೈತರಿಗೆ 40 ದಿನಗಳ ಸಾಲ ಪಡೆಯಲು ಅವಕಾಶ ಕಲ್ಪಿಸುತ್ತದೆ. ಬಡ್ಡಿ ದರ ಇತರೆ ಎಸ್‌ಬಿಐ ಕಾರ್ಡ್‌ಗಳಿಗೆ ವಿಧಿಸಲಾಗುವಷ್ಟೇ ಇರುತ್ತದೆ. ಆದರೆ, ಬಾಕಿ ಮೊತ್ತವನ್ನು ಪಾವತಿಸದೇ ಇದ್ದರೆ ವಿಧಿಸಲಾಗುವಂಥ ದಂಡದ ಮೊತ್ತ ಇಲ್ಲಿ ಕಡಿಮೆಯಿರುತ್ತದೆ. ಈ ಕಾರ್ಡ್‌ಗಳಲ್ಲಿ ನೀಡಲಾಗಿರುವ ಸಾಲದ ಮಿತಿಯ ಶೇ.20ರಷ್ಟನ್ನು ರೈತರು ಗೃಹೋಪಯೋಗಿ ವಸ್ತುಗಳ ಖರೀದಿಗೆ ಬಳಸಬಹುದು. ಉಳಿದ ಮೊತ್ತವನ್ನು ಕೃಷಿ ಸಂಬಂಧಿ ಉತ್ಪನ್ನಗಳ ಖರೀದಿಗಷ್ಟೇ ಬಳಸಬೇಕು ಎಂದಿದ್ದಾರೆ. ಇದೇ ವೇಳೆ, ಕೃಷಿ ಕ್ಷೇತ್ರದಲ್ಲೂ ಇ-ವಾಣಿಜ್ಯ ಚಟುವಟಿಕೆಗಳು ಹೆಚ್ಚಬೇಕು ಎಂದೂ ಅವರು ಹೇಳಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್‌ನಂತಲ್ಲ: ಈವರೆಗೆ ಸಣ್ಣ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯುತ್ತಿ ದ್ದರು. ಆದರೆ, ಇದು ಬ್ಯಾಂಕ್ ಖಾತೆಗೆ ಲಿಂಕ್ ಆಗಿ ಇರುತ್ತಿತ್ತು. ಅಲ್ಲದೆ, ಖಾತೆದಾರರಿಗಷ್ಟೇ ನಗದು ಸಾಲದ ಸೌಲಭ್ಯ ನೀಡಲಾಗುತ್ತಿತ್ತು. ಆದರೆ, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನ ನಿಯಮಗಳು ಈ ರೀತಿ ಇರುವುದಿಲ್ಲ ಎಂದಿದ್ದಾರೆ ಕುಮಾರ್.