ಚಿಕ್ಕನಾಯಕನಹಳ್ಳಿ: ಸಣ್ಣ ವಹಿವಾಟಿನ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಚಿಲ್ಲರೆ ಸಮಸ್ಯೆ ಯಾಗುವುದು ಸಾಮಾನ್ಯ. ಇದರಿಂದ ವ್ಯಾಪಾರಿಗಳಿಗೆ ನಷ್ಟ ಅಥವಾ ಗ್ರಾಹಕರು ನಂಬಿಕೆ ಕಳೆದುಕೊಳ್ಳುವ ಮುಜುಗರ. ಹೀಗಾಗಿ ಈ ಸಮಸ್ಯೆ ನಿವಾರಣೆಗೆ ಪಟ್ಟಣದ ಎಸ್‌ಬಿಐ ಬ್ಯಾಂಕ್ ಭಿಮ್ ಆಧಾರ್ ಎಸ್‌ಬಿಐ (ಪಿಬಿ 510) ಎಂಬ ಫಿಂಗರ್ ಪ್ರಿಂಟ್ ಕ್ಯಾಶ್‌ಲೆಸ್ ಡಿವೈಸ್ ಪರಿಚಯಿಸಿದೆ.
2000 ರೂ.ವರೆಗೆ ವಹಿವಾಟು: ಮನೆಯಲ್ಲಿ ಪರ್ಸ್, ಮೊಬೈಲ್ ಬಿಟ್ಟು ಬಂದಿದ್ದರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಸಾಧನದಿಂದ ಗ್ರಾಹಕರು, ವ್ಯಾಪಾರಸ್ಥರು ಮೊಬೈಲ್, ಜೇಬಿನಲ್ಲಿ ಹಣ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಕನಿಷ್ಠ 1 ರೂ.ನಿಂದ 2000 ರೂ.ವರೆಗಿನ ವಹಿವಾಟು ಮಾಡಲು ಅವಕಾಶವಿದೆ. ಸಣ್ಣ ವ್ಯಾಪಾರಸ್ಥರು ಪ್ರತಿದಿನ 5 ಸಾವಿರ ರೂ. ಈ ಡಿವೈಸ್ ಮೂಲಕ ಖಾತೆಗೆ ಜಮಾ ಮಾಡಿಕೊಳ್ಳಬಹುದಾಗಿದೆ.
ಬ್ಯಾಂಕ್‌ನಲ್ಲಿ ಆಧಾರ್ ನಂಬರ್ ನಮೂದಿಸಿದ್ದರೆ ಮಾತ್ರ ವಹಿವಾಟು ನಡೆಸಲು ಸಾಧ್ಯ. ಟೀ ಅಂಗಡಿ , ಚಿಲ್ಲರೆ ಅಂಗಡಿ, ಬೀದಿಬದಿ ವ್ಯಾಪಾರಸ್ಥರು, ಆಟೋ, ಸ್ಟುಡಿಯೋಗಳು ಸೇರಿದಂತೆ ಸಣ್ಣ ಪ್ರಮಾಣದಲ್ಲಿ ವಹಿವಾಟು ನಡೆಸುವ ಅಂದರೆ ಪ್ರತಿದಿನ 5 ಸಾವಿರ ರೂ. ವಹಿವಾಟು ಮಾಡುವ ವ್ಯಾಪಾರಸ್ಥರು ಡಿವೈಸ್‌ನ ಅನುಕೂಲ ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ಜೇಬಿನಲ್ಲಿ ಹಣವಿಲ್ಲದಿದ್ದರೂ ಬೆರಳ ತುದಿ ಬಳಸಿ ವಸ್ತು ಕೊಳ್ಳಬಹುದಾಗಿದೆ.
ಡಿವೈಸ್‌ನ ಕಾರ್ಯ ಹೇಗೆ: ಡಿಜಿಟಲ್ ಇಂಡಿಯಾ ಕನಸು ನನಸಾಗುವ ನಿಟ್ಟಿನಲ್ಲಿ ಡಿವೈಸ್ ತಯಾರಿಸ ಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ನಂಬರ್ ನೋಂದಣಿ ಮಾಡಿಸಿರಬೇಕು. ಬೆರಳ ತುದಿಯನ್ನು ಈ ಡಿವೈಸ್ ಮೇಲೆ ಇಟ್ಟರೆ ನಮ್ಮ ಆಧಾರ್ ಕಾರ್ಡ್ ಯಾವೆಲ್ಲ ಬ್ಯಾಂಕ್‌ಗಳಲ್ಲಿ ನೋಂದಣಿ ಆಗಿರುತ್ತದೋ ಆ ಬ್ಯಾಂಕ್‌ನ ಖಾತೆ ಮಾಹಿತಿ ತಿಳಿಸುತ್ತದೆ. ಯಾವ ಬ್ಯಾಂಕ್ ಖಾತೆಯಲ್ಲಿ ಹಣ ವಿರುತ್ತದೆಯೋ ಅದರಿಂದ ನಾವು ಖರೀದಿಸಿದ ವಸ್ತುವಿಗೆ ಹಣ ನೀಡಬಹುದಾಗಿದೆ.
ಡಿವೈಸ್‌ನ ಅನುಕೂಲಗಳು: ಈ ಉಪಕರಣದ ಮೂಲಕ 1 ರೂ. ಮೌಲ್ಯದ ವಸ್ತು ಕೊಳ್ಳಲು ಅವಕಾಶ ವಿದೆ. ರಾತ್ರಿ ವ್ಯಾಪಾರ ಮಾಡುವ ಆಂಗಡಿಗಳ ಮಾಲೀಕರು ಡಿವೈಸ್ ಬಳಸುವುದರಿಂದ ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳಬಹುದು. ಚಿಲ್ಲರೆ ಹುಡುಕುವ ಸಮಸ್ಯೆ ಇರುವುದಿಲ್ಲ ಹಾಗೂ ಹಣ ಪಡೆಯುವ ಹಾಗೂ ವಸ್ತು ಖರೀದಿಸುವುದಕ್ಕೆ ದಾಖಲೆ ಸಿಗುತ್ತದೆ. ಕ್ಯಾಶ್‌ಲೆಸ್ ವಹಿವಾಟಿಗೆ ಈ ಡಿವೈಸ್ ಅನುಕೂಲಕರವಾಗಿದೆ.
● ಚೇತನ್