Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿ : ಸತತ ಎರಡನೇ ಫೈನಲ್‌ಗೆ ತಮಿಳುನಾಡು ಲಗ್ಗೆ

12:28 AM Jan 30, 2021 | Team Udayavani |

ಅಹ್ಮದಾಬಾದ್: ದಿನೇಶ್‌ ಕಾರ್ತಿಕ್‌ ನಾಯಕತ್ವದ ತಮಿಳುನಾಡು ಸತತ ಎರಡನೇ ಬಾರಿಗೆ “ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20′ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದೆ. ಶುಕ್ರವಾರ ನಡೆದ ಮೊದಲ ಸೆಮಿಯಲ್ಲಿ ಅದು ರಾಜಸ್ಥಾನವನ್ನು 7 ವಿಕೆಟ್‌ಗಳಿಂದ ಮಣಿಸಿತು.

Advertisement

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ 9 ವಿಕೆಟಿಗೆ 154 ರನ್‌ ಗಳಿಸಿದರೆ, ತಮಿಳುನಾಡು 18.4 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 158 ರನ್‌ ಬಾರಿಸಿ ಮೆರೆಯಿತು. ಮಧ್ಯಮ ವೇಗಿ ಎಂ. ಮೊಹಮ್ಮದ್‌ (24ಕ್ಕೆ 4 ವಿಕೆಟ್‌) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅರುಣ್‌ ಕಾರ್ತಿಕ್‌ (ಅಜೇಯ 89) ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ತಮಿಳುನಾಡು 17 ರನ್‌ ಆಗುವಷ್ಟರಲ್ಲಿ ಹರಿ ನಿಶಾಂತ್‌ (4) ಮತ್ತು ಬಾಬಾ ಅಪರಾಜಿತ್‌ (2) ಅವರ ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತ್ತು. ಆದರೆ ಓಪನರ್‌ ಎನ್‌. ಜಗದೀಶನ್‌ (28) ಮತ್ತು ಅರುಣ್‌ ಕಾರ್ತಿಕ್‌ ಸೇರಿಕೊಂಡು ತಂಡವನ್ನು ಆಧರಿಸುವ ಕೆಲಸಕ್ಕೆ ಮುಂದಾದರು. 3ನೇ ವಿಕೆಟಿಗೆ 52 ರನ್‌ ಒಟ್ಟುಗೂಡಿತು.

ಕಾರ್ತಿಕ್‌ದ್ವಯರ ಅಜೇಯ ಆಟ
ನಾಯಕ ದಿನೇಶ್‌ ಕಾರ್ತಿಕ್‌ (ಔಟಾ ಗದೆ 26) ಅವರನ್ನು ಕೂಡಿಕೊಂಡ ಅರುಣ್‌ ಕಾರ್ತಿಕ್‌ ರಾಜಸ್ಥಾನ ಬೌಲರ್‌ಗಳ ಮೇಲೆರಗಿ ಹೋದರು. ತಂಡಕ್ಕೆ ಬೇರೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ಕಾರ್ತಿಕ್‌ದ್ವಯರು 4ನೇ ವಿಕೆಟಿಗೆ 89 ರನ್‌ ಪೇರಿಸಿ ತಂಡದ ಗೆಲುವನ್ನು ಸಾರಿದರು. ಅರುಣ್‌ ಕಾರ್ತಿಕ್‌ ಅವರ 89 ರನ್‌ 54 ಎಸೆತಗಳಿಂದ ಬಂತು. ಸಿಡಿಸಿದ್ದು 9 ಫೋರ್‌ ಹಾಗೂ 3 ಸಿಕ್ಸರ್‌.

ರಾಜಸ್ಥಾನ್‌ ಸರದಿಯಲ್ಲಿ ನಾಯಕ ಅಶೋಕ್‌ ಮೆನಾರಿಯಾ (51) ಅರ್ಧ ಶತಕ ಬಾರಿಸಿದರೆ, ಅರ್ಜಿತ್‌ ಗುಪ್ತಾ 45 ರನ್‌ ಮಾಡಿದರು.

Advertisement

ಬರೋಡ-ಪಂಜಾಬ್‌ ನಡುವಿನ ದ್ವಿತೀಯ ಸೆಮಿಫೈನಲ್‌ನಲ್ಲಿ ಗೆದ್ದ ತಂಡ ವನ್ನು ತಮಿಳುನಾಡು ರವಿವಾರದ ಫೈನಲ್‌ನಲ್ಲಿ ಎದುರಿಸಲಿದೆ. ಕಳೆದ ವರ್ಷದ ಪ್ರಶಸ್ತಿ ಸಮರದಲ್ಲಿ ತಮಿಳು ನಾಡು ಕರ್ನಾಟಕಕ್ಕೆ ಶರಣಾಗಿತ್ತು.

ಸಂಕ್ಷಿಪ್ತ ಸ್ಕೋರ್‌:
ರಾಜಸ್ಥಾನ-9 ವಿಕೆಟಿಗೆ 154 (ಮೆನಾರಿಯಾ 51, ಗುಪ್ತ 45, ಆದಿತ್ಯ ಗರ್ವಾಲ್‌ 29, ಎಂ. ಮೊಹಮ್ಮದ್‌ 24ಕ್ಕೆ 4, ಸಾಯಿ ಕಿಶೋರ್‌ 16ಕ್ಕೆ 2). ತಮಿಳುನಾಡು-18.4 ಓವರ್‌ಗಳಲ್ಲಿ 3 ವಿಕೆಟಿಗೆ 158 (ಅರುಣ್‌ ಕಾರ್ತಿಕ್‌ ಔಟಾಗದೆ 89, ಜಗದೀಶನ್‌ 28, ದಿನೇಶ್‌ ಕಾರ್ತಿಕ್‌ ಔಟಾಗದೆ 26).

Advertisement

Udayavani is now on Telegram. Click here to join our channel and stay updated with the latest news.

Next