Advertisement

ಕನ್ನಡಕ್ಕೆ ಸಯೇಷಾ ಪದಾರ್ಪಣೆ

09:56 AM Mar 28, 2020 | mahesh |

ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯರಾಗಿ ಪರಭಾಷಾ ಕಲಾವಿದರ ಆಗಮನವಾಗುವುದು ಹೊಸದೇನಲ್ಲ. ಪರಭಾಷಾ ನಟಿಯರನ್ನು ಕರೆತಂದು, ಇಲ್ಲಿ ಅವರಿಗೆ ಸಾಕಷ್ಟು ಹೆಸರು, ಜನಪ್ರಿಯತೆ ಗಳಿಸಲು ಅವಕಾಶ ಕಲ್ಪಿಸುವುದುಂಟು. ಈಗಾಗಲೇ ಪ್ರತಿವರ್ಷ ಇಂತಹ ಹತ್ತಾರು ನಟಿಯರು ಪರಭಾಷೆಯಿಂದ ಕನ್ನಡಕ್ಕೆ ಬಂದು ಮಿಂಚಿ ಇಲ್ಲೇ ಸೆಟಲ್‌ ಆಗುವುದು ಅಥವಾ ವಾಪಾಸ್‌ ಹೋಗುವುದು ನಡೆದುಕೊಂಡೇ ಬರುತ್ತಿದೆ. ಈ ವರ್ಷ ಈ ಸಾಲಿಗೆ ಮತ್ತೂಬ್ಬ ತಮಿಳಿನ ಜನಪ್ರಿಯ ನಟಿಯ ಹೆಸರು ಸೇರ್ಪಡೆಯಾಗುತ್ತಿದೆ. ಅವರೇ ಸಯೇಷಾ ಸೈಗಲ್‌.

Advertisement

2015ರಲ್ಲಿ ತೆರೆಕಂಡ ತೆಲುಗಿನ ಅಖಿಲ್‌ ಚಿತ್ರದ ಮೂಲಕ ನಾಯಕ ನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ನಟಿ ಸಯೇಷಾ ಸೈಗಲ್‌, ನಂತರ ಶಿವಾಯ್‌ ಚಿತ್ರದ ಮೂಲಕ ಬಾಲಿವುಡ್‌ಗೂ ಅಡಿಯಿಟ್ಟ ಚೆಲುವೆ. ಅದಾದ ನಂತರ ತಮಿಳು ಚಿತ್ರರಂಗದತ್ತ ಮುಖಮಾಡಿದ ಸಯೇಷಾ ಸೈಗಲ್‌, ವನಮಗನ್‌, ಕುದಾಯಿಕುಟ್ಟಿ ಸಿಂಘಂ, ಜುಂಗಾ, ಘಜಿನಿಕಾಂತ್‌, ಕಾಪ್ಪಾನ್‌ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿ ನೆಲೆಯನ್ನು ತಮಿಳಿನಲ್ಲಿ ಭದ್ರಪಡಿಸಿಕೊಂಡಾಕೆ. ಸದ್ಯ ಸಯೇಷಾ ತಮಿಳಿನಲ್ಲಿ ಟೆಡ್ಡಿ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರ ಕೂಡ ಈ ವರ್ಷದ ಕೊನೆಗೆ ತೆರೆಗೆ ಬರುವ ಸಾಧ್ಯತೆ ಇದೆ.

ಇವೆಲ್ಲದರ ನಡುವೆ ಸಯೇಷಾ ಸೈಗಲ್‌ ಎನ್ನುವ ಈ ಚೆಲುವೆ ಈಗ ಕನ್ನಡ ಚಿತ್ರರಂಗಕ್ಕೂ ಎಂಟ್ರಿಯಾಗುತ್ತಿದ್ದಾರೆ. ಹೌದು, ಸಯೇಷಾ ಸೈಗಲ್‌ ಶೀಘ್ರದಲ್ಲಿಯೇ ಯುವರತ್ನ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ. ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ ಯುವರತ್ನ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಸಯೇಷಾ ಸೈಗಲ್‌, ಕನ್ನಡ ಚಿತ್ರರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇತ್ತೀಚೆಗಷ್ಟೇ ಪುನೀತ್‌ ರಾಜಕುಮಾರ್‌ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಯುವರತ್ನ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಇದರಲ್ಲಿ ಅವರು ಹೋಮ್ಲಿ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

ಇನ್ನು ಮೊದಲ ಬಾರಿ ಕನ್ನಡ ಚಿತ್ರರಂಗಕ್ಕೆ ಪ್ರವೇಶವಾಗುತ್ತಿರುವುದರ ಬಗ್ಗೆ ಮಾತನಾಡುವ ಅವರು, “ದಕ್ಷಿಣ ಭಾರತದಲ್ಲಿ ಈಗಾಗಲೇ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇಲ್ಲಿರುವ ಇನ್ನೊಂದು ದೊಡ್ಡ ಚಿತ್ರರಂಗದ ಕನ್ನಡದಲ್ಲೂ ಅಭಿನಯಿಸಬೇಕು ಎಂಬ ಆಸೆಯಿತ್ತು. ಆ ಆಸೆ ಈಗ ಈಡೇರುತ್ತಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಪುನೀತ್‌ ರಾಜಕುಮಾರ್‌ ಅವರಂಥ ಬಿಗ್‌ ಸ್ಟಾರ್‌ ಜೊತೆಗೆ ಕನ್ನಡದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ಲಕ್ಕಿ ಎಂದೇ ಭಾವಿಸುತ್ತೇನೆ. ಇಡೀ ಚಿತ್ರತಂಡದ ಜೊತೆ ಯುವರತ್ನ ಸಿನಿಮಾದಲ್ಲಿ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ ಕೊಟ್ಟಿದೆ. ಆದಷ್ಟು ಬೇಗ ಕನ್ನಡದ ಸ್ಕ್ರೀನ್‌ನಲ್ಲಿ ನಾನು ಹೇಗೆ ಕಾಣುತ್ತೇನೆ ಎಂದು ನೋಡುವ ಕುತೂಹಲ ನನಗೂ ಇದೆ. ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಈ ಸಿನಿಮಾ ಮತ್ತು ನನ್ನ ಪಾತ್ರ ಎರಡೂ ಇಷ್ಟವಾಗುತ್ತದೆ’ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ.

“ಇನ್ನು ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಮತ್ತಷ್ಟು ಅವಕಾಶಗಳು ಬಂದರೆ ಅಭಿನಯಿಸುತ್ತೀರಾ’ ಎಂಬ ಪ್ರಶ್ನೆಗೆ ಉತ್ತರಿಸುವ ಸಯೇಷಾ, “ನಾನೊಬ್ಬಳು ಕಲಾವಿದೆ. ನನಗೆ ಅಭಿನಯ ಮತ್ತು ನನ್ನ ಪಾತ್ರಗಳು ಮುಖ್ಯವೇ ಹೊರತು ಯಾವುದೇ ಭಾಷೆಯಲ್ಲ. ಹಾಗಾಗಿ ತೆಲುಗು, ತಮಿಳು, ಕನ್ನಡ ಹೀಗೆ ಯಾವುದೇ ಭಾಷೆಯ ಸಿನಿಮಾಗಳಿರಲಿ, ಅಲ್ಲಿ ಒಳ್ಳೆಯ ಸಬ್ಜೆಕ್ಟ್ ಮತ್ತು ನನಗೆ ಒಪ್ಪುವಂಥ ಪಾತ್ರಗಳಿದ್ದರೆ, ಖಂಡಿತ ಅಭಿನಯಿ ಸುತ್ತೇನೆ’ ಎನ್ನುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next