ಬದುಕು ನಿಂತ ನೀರಲ್ಲ ಸದಾ ಹರಿಯುತ್ತಿದ್ದರೆ ಚೆನ್ನ. ಆಹಾ! ಇದು ನನ್ನ ನೆನಪಿನ ಬುತ್ತಿಯಲ್ಲಿ ನೆನಪಾಗುವ ಸಾಲುಗಳು. ಹೌದು ಬದುಕಿನಲ್ಲಿ ಸಿಹಿಯಿರಲಿ ಕಹಿಯಿರಲಿ, ಸಮಾನಾಗಿ ಸ್ವೀಕರಿಸಿಕೊಂಡು ಮುಂದೆ ಸಾಗುವುದು ಜಾಣತನ. ಇನ್ನು ಬದುಕಿನ ಹಳೆಯ ಕಹಿ ನೆನಪುಗಳನ್ನು ಮರೆಯಲೇ ಬೇಕಲ್ಲವೇ? ಹೌದು 2020 ಎಲ್ಲರ ಪಾಲಿಗೂ ಬದುಕುವುದನ್ನು ಕಲಿಸಿಕೊಟ್ಟ ವರ್ಷ. ಜೊತೆಗೆ ಮಾನವೀಯತೆ ಎನ್ನುವುದು ಕಳೆದ ವರ್ಷ ಎಲ್ಲರ ಪಾಲಿಗೆ ದೂರಾದ ಮಾತಾಗಿತ್ತು.
ಎಲ್ಲೆಡೆಯೂ ಕೋವಿಡ್ ಮಹಾಮಾರಿಯ ಆರ್ಭಟವೂ ಜೋರಾಗಿಯೇ ಇತ್ತು. ರಾಜರೋಷದಿಂದ ತಿರುಗಾಡುತ್ತಿದ್ದ ಜನರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದರು. ಯಾರ ಜೊತೆಗೂ ಬೆರೆಯಲೂ ಭಯಪಡುವ ಸ್ಥಿತಿಯೂ ಇಡೀ ವಿಶ್ವದಲ್ಲಿಯೇ ನಿರ್ಮಾಣವಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಎಲ್ಲರ ಮುಂದೆ ಬದುಕನ್ನು ಮುನ್ನಡೆಸುವ ಸಾಹಸ ಇತ್ತು. ಉದ್ಯೋಗ ಇಲ್ಲದೇ ಜೇಬು ಖಾಲಿಯಿದ್ದರೂ ಮೂರು ಹೊತ್ತಿನ ತುತ್ತಿಗಾಗಿ ಪರಡಾಡಬೇಕಿತ್ತು. ಅದಕ್ಕೆ ಅನೇಕ ಸಂಘ ಸಂಸ್ಥೆಗಳು ಬಡಕುಟುಂಬಗಳ ಹೊಟ್ಟೆಯನ್ನು ತಣಿಸಿದ್ದವು. ದಿನ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಜೀವನ ಅತಂತ್ರ ಸ್ಥಿತಿಯತ್ತ ಸಾಗಿತ್ತು. ಕೋವಿಡ್ ನಿಂದ ಮೃತಪಟ್ಟವರ ಸ್ಥಿತಿಯಂತೂ ಹೇಳತೀರದು. ಕಡೆ ಬಾರಿ ಮುಖ ನೋಡಲು ಸಾಧ್ಯವಾಗದಂತಹ ಪರಿಸ್ಥಿತಿಯೂ ಕುಟುಂಬದವರಿಗೆ ಬಂದೋಗಿತ್ತು.
ಅಬ್ಬಾ ಎಷ್ಟೆಲ್ಲಾ ಬದಲಾವಣೆಗಳು, ತಟಸ್ಥವಾಗಿ ನಡೆಯುತ್ತಿದ್ದ ಬದುಕಿನ ತುಂಬಾ ಅಲ್ಲೋಲ ಕಲ್ಲೋಲ. ಪ್ರತಿ ವರ್ಷದಂತೆ ಸಾಮಾನ್ಯವಾಗಿ ಎಲ್ಲರೂ ಹಾಕಿಕೊಂಡಿದ್ದ ಯೋಜನೆಗಳೆಲ್ಲವೂ ಬುಡಮೇಲು. ವರ್ಷದ ಎರಡನೇ ತಿಂಗಳಿನಿಂದಲೇ ಬದುಕಿನಲ್ಲಿ ಘನಗಂಭೀರ ಬದಲಾವಣೆಯ ಗಾಳಿ ಬೀಸಿತ್ತು.
ವರ್ಷದ ಕೊನೆಯ ತಿಂಗಳಿಗೆ ಬರುವಷ್ಟರಲ್ಲಿ 2020ಕ್ಕೆ ಎಲ್ಲರೂ ಹಿಡಿ ಶಾಪ ಹಾಕಿದ್ದರು. ಆದಷ್ಟೂ ಬೇಗನೇ ಈ ವರುಷ ಕಳೆದ ಹೋಗಲಿ. ಮುಂದಿನ 2021ರಲ್ಲಾದರೂ ನಿರಾಳತೆಯ ಬದುಕು ಸೃಷ್ಟಿಯಾಗಲಿ. ಆದರೀಗ 2021ರ ಹೊಸ್ತಿಲಿಗೆ ಕಾಲಿಟ್ಟಿದ್ದೇವೆ. ಕಳೆದ ವರ್ಷ ಹಾಕಿ ಕೊಂಡಿದ್ದ ಯೋಜನೆಗಳನ್ನು ಈಡೇರಿಸುವುದರ ಜೊತೆಗೆ ಬದುಕನ್ನು ಪಾಸಿಟಿವ್ ಆಗಿ ಸ್ವೀಕರಿಸುವುದನ್ನು ಕಲಿಯಲು ಇಂದಿನಿಂದಲೇ ಅಣಿಯಾಗಿ. ಕಳೆದ ವರ್ಷದಲ್ಲಿ ನೆಗಟಿವ್ ಜೀವನದ ಬದಲಾಗಿ ಬೇರೆನೂ ಕಾಣಲು ಸಾಧ್ಯವೇ ಆಗಲಿಲ್ಲ. ಲಾಕ್ ಡೌನ್‌ನಿಂದ ಮನೆಯವರಿಂದ ಸಮಯ ಕಳೆಯಲು ಕಾಲಾವಕಾಶ ಸಿಕ್ಕಿದ್ದರೂ ಬದುಕಿನ ಕುರಿತು ಬಹುದೊಡ್ಡ ಯೋಚನೆಗಳು ಅನೇಕರಲ್ಲಿ ಕಾಡಿತ್ತು. ಆದರೆ ಇದೀಗ ಹೊಸ ವರ್ಷದ ಮೊದಲ ದಿನದಲ್ಲಿ ನಾವಿದ್ದೇವೆ. ಹೊಸ ವರ್ಷದ ಮೊದಲ ದಿನದಿಂದಲೇ ಬದುಕನ್ನು ಚಾಲೆಂಜ್ ಆಗಿ ತೆಗೆದುಕೊಳ್ಳಿ. ಅಗುವುದೆಲ್ಲಾ ಒಳ್ಳೆಯದ್ದಕ್ಕೆ ಎಂದು ತಿಳಿದು ಹೊಸ ವರ್ಷದ ಮೊದಲ ದಿನವನ್ನು ಸಂಭ್ರಮಿಸಿ.
ಈ ಬಾರಿಯಲ್ಲಿ ಏನೆಲ್ಲಾ ಉತ್ತಮ ಕೆಲಸ ಕಾರ್ಯಗಳನ್ನು ಮಾಡಬೇಕು ಎಂಬುದರ ಕುರಿತು ಯೋಜನೆ ಇರಲಿ. ಎಲ್ಲರಿಗೂ ಒಳಿತು ಮಡುವ ಮನಸ್ಥಿತಿ ನಿಮ್ಮದಾಗಿರಲಿ. ಬದುಕನ್ನು ಸುಂದರ ಗೊಳಿಸಲು ನಿಮ್ಮ ಬಳಿ ಸುಮಾರು ಒಂದು ವರುಷ ಕಾಲಾವಕಾಶ ಇದೆ. ಕಳೆದ ವರ್ಷದ ಬದುಕಿನಲ್ಲಾದ ಏರುಪೇರಿನ ಕಡೆಗೆ ತಲೆ ಕೆಡಿಸಿಕೊಳ್ಳದೇ ಮುಂದೆ ಮಾಡಬೇಕಾಗಿರುವ ಕೆಲಸದ ಕಡೆಗೆ ಗಮನ ಹರಿಸುವುದು ಉತ್ತಮ. ಬದುಕಿನಲ್ಲಿ ಘಟಿಸಿದ ಕಹಿ ನೆನಪುಗಳಿಗೆ ಗುಡ್ ಬಾಯ್ ಹೇಳುತ್ತಾ, ಹೊಸ ವರ್ಷದಿಂದ ಹೊಸ ಕನಸ್ಸನ್ನು ಕಾಣುತ್ತಾ, ನನಸಾಗಿಸಿಕೊಳ್ಳಿ. ಎಲ್ಲರಿಗೂ ಈ ಬಾರಿ ಹೊಸ ವರ್ಷ ಎಲ್ಲರ ಬದುಕಿನಲ್ಲಿ ಹರುಷವನ್ನು ತರುವಂತಾಗಲಿ.
-ಸಾಯಿ
ಇದನ್ನೂ ಓದಿ: ಹೊಸ ವರ್ಷದ ಶುಭಾಶಯಗಳು: ವರ್ಷಾರಂಭದದಲ್ಲಿ ನಿಮ್ಮ ದಿನಭವಿಷ್ಯ ಹೇಗಿದೆ ?