ಬೆಂಗಳೂರು: ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 550ಕ್ಕೂ ಹೆಚ್ಚು ಭರವಸೆ ನೀಡಿತ್ತು. ಆದರೆ ಜನರಿಗೆ ನೀಡಿದ ಭರವಸೆಯ ಶೇ.10ರಷ್ಟು ಈಡೇರಿಸುವ ಕೆಲಸವನ್ನು ಈವರೆಗೂ ಮಾಡಿಲ್ಲ. ಈ ಬಗ್ಗೆ ಉತ್ತರ ಕೂಡ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ “ಪೇ ಸಿಎಂ’ ಅಭಿಯಾನದ ರೀತಿಯಲ್ಲೆ “ಸೇ ಸಿಎಂ'(ಹೇಳಿ ಮುಖ್ಯಮಂತ್ರಿಗಳೇ) ಅಭಿಯಾನ ಆರಂಭಿಸುವುದಾಗಿ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕಾಂಗ್ರೆಸ್ ಇದೇ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಈವರೆಗೆ 50 ಪ್ರಶ್ನೆಗಳನ್ನು ಕೇಳಿದೆ. ಆದರೆ ಇಲ್ಲಿಯವರೆಗೂ ಉತ್ತರ ನೀಡುವ ಪ್ರಯತ್ನ ಮಾಡಿಲ್ಲ. ಆ ಹಿನ್ನೆಲೆಯಲ್ಲಿ ಶೀಘ್ರದಲ್ಲೆ “ಪೇಸಿಎಂ’ ಮಾದರಿಯಲ್ಲೇ “ಸೇಸಿಎಂ’ ಅಭಿಯಾನ ದೊಡ್ಡ ಮಟ್ಟದಲ್ಲಿ ಆರಂಭಿಸುವ ಎಚ್ಚರಿಕೆ ನೀಡಿದರು.
ಚುನಾವಣೆ ವೇಳೆ ಬಿಜೆಪಿ ಜನರಿಗೆ ಭರವಸೆಗಳ ಸಂಕಲ್ಪಗಳನ್ನೇ ಮಾಡಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಆ ಎಲ್ಲ ಸಂಕಲ್ಪಗಳ ಬಗ್ಗೆ ಮಾತೇ ಇಲ್ಲವಾಗಿದೆ. ಭ್ರಷ್ಟಾಚಾರಕ್ಕೆ ಉತ್ತರ ಕೊಡುವುದನ್ನು ಬಿಟ್ಟು ಬಿಜೆಪಿ ಮುಖಂಡರು ಎಲ್ಲ ಕೆಲಸ ಮಾಡಿದರು. “ನಿಮ್ಮ ಹತ್ತಿರ ಇದೇಯೆ ಉತ್ತರ’ ಎಂದು ಕಾಂಗ್ರೆಸ್ ಪಕ್ಷ ಪ್ರತಿದಿನ ಪ್ರಶ್ನೆಗಳನ್ನು ಜಾಲತಾಣಗಳ ಮೂಲಕ ಕೇಳಿತ್ತು. ಆದರೆ ಆ ಒಂದೇ ಒಂದು ಪ್ರಶ್ನೆಗೆ ಉತ್ತರ ನೀಡಿಲ್ಲ ಎಂದು ದೂರಿದರು.
ಕೆಪಿಸಿಸಿ ವಕ್ತಾರ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ರಮೇಶ್ ಬಾಬು ಮಾತನಾಡಿ, ಕಾಂಗ್ರೆಸ್ ಜಾಲತಾಣಗಳ ಮೂಲಕ ಮಾಡಿದ ಪ್ರಶ್ನೆಗಳಿಗೆ ಯಾವುದೇ ಪ್ರಶ್ನೆಗೆ ಉತ್ತರಿಸಲು ಬಿಜೆಪಿ ಮುಖಂಡರಿಗೆ ಮತ್ತು ಸಚಿವರಿಗೆ ಇದುವರೆಗೂ ಆಗಿಲ್ಲ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬೇರೆ ಬೇರೆ ರೀತಿಯ ಆರೋಪ ಮಾಡುತ್ತಿದ್ದಾರೆ. ಮೊದಲು ನಾವು ಕೇಳಿದ ಪ್ರಶ್ನೆಗಳ ಉತ್ತರಿಸಲಿ ಎಂದು ಸವಾಲು ಹಾಕಿದರು.
ಸಿಬಿಐ ಸುಮೊಟೊ ಪ್ರಕರಣ ದಾಖಲಿಸಲಿ
ಬೆಂಗಳೂರು: ಹೊನ್ನಾವರದ ಪರೇಶ್ ಮೇಸ್ತ ಸಾವಿನ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಒಂದು ವೇಳೆ ಸಿಬಿಐ ಸುಮೊಟೊ ಪ್ರಕರಣ ದಾಖಲು ಮಾಡದೇ ಹೋದರೆ ಹದಿನೈದು ದಿನಗಳಲ್ಲಿ ಕಾಂಗ್ರೆಸ್ ಈ ವಿಚಾರವಾಗಿ ಸಿಬಿಐಗೆ ದೂರು ನೀಡಲಿದೆ ಎಂದು ತಿಳಿಸಿದರು.
ಪ್ರಕರಣದ ಸತ್ಯಾಸತ್ಯತೆ ತಿಳಿಯದೇ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡಿ, ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸುವುದರ ಜತೆಗೆ ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣರಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಳಿಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ, ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ ಸೇರಿ ಇನ್ನಿತರ ಬಿಜೆಪಿ ಮುಖಂಡರ ವಿರುದ್ಧ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.