ಸವದತ್ತಿ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಇನಾಮಹೊಂಗಲದ ರಸ್ತೆಗೆ ನಿರ್ಮಿಸಿದ ಪರ್ಯಾಯ ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ಶನಿವಾರ ತಡರಾತ್ರಿ ಮತ್ತೆ ಸಂಪರ್ಕ ಕಡಿತಗೊಂಡಿದೆ.
ಶನಿವಾರ ರಾತ್ರಿ ಕಿತ್ತೂರು ಹಾಗೂ ಮೇಲ್ಭಾಗದ ಪ್ರದೇಶದಲ್ಲಿ ಭಾರೀ ಮಳೆ ಸುರಿದು ಮತ್ತೆ ಇನಾಮಹೊಂಗಲ ಗ್ರಾಮದ ಹಳ್ಳವು ತುಂಬಿ ಹರಿದು ಪರ್ಯಾಯ ರಸ್ತೆಯ ನೀರಿನಲ್ಲಿ ಮುಳುಗಿದೆ. ಇದರಿಂದ ಸಂಚಾರ ಸ್ತಬ್ಧಗೊಂಡಿದೆ. ಈ ಮೊದಲು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಸೇತುವೆಗೆ ರಸ್ತೆ ಸಂಪರ್ಕ ಕಲ್ಪಿಸುವ ಕಾರ್ಯ ನಿಧಾನಗತಿಯಲ್ಲಿ ನಡೆದಿದ್ದರ ಪರಿಣಾಮ, ಪರ್ಯಾಯ ರಸ್ತೆಯ ನಿರ್ಮಾಣ ಮಾಡಿಕೊಡುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.
ಆದರೆ ಪರ್ಯಾಯ ರಸ್ತೆ ನಿರ್ಮಾಣ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಇದೀಗ ಅಧಿಕ ಮಳೆ ಆಗುತ್ತಿರುವುದರಿಂದ ಎರಡು ಬಾರಿ ಪರ್ಯಾಯ ರಸ್ತೆ ಸ್ಥಗಿತಗೊಂಡು ನೀರಿನ ಪ್ರಮಾಣ ಕ್ಷೀಣಿಸಿದ ನಂತರ ಸಂಚಾರ ಪ್ರಾರಂಭವಾಯಿತು. ಆದರೆ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಪ್ರವಾಹದ ರೀತಿಯಲ್ಲಿಯೇ ರಭಸದಿಂದ ಹರಿಯುತ್ತಿದೆ.
ಲೋಕೋಪಯೋಗಿ ಇಲಾಖೆಯಿಂದ ಮತ್ತೆ ಈ ಸೇತುವೆ ಪುನರ್ ನಿರ್ಮಾಣಕ್ಕಾಗಿ ಕ್ರಮ ವಹಿಸಲಾಗಿದೆ. ತುರ್ತಾಗಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಸುಮಾರು 43 ಲಕ್ಷ ರೂ. ಸರಕಾರದ ಅನುದಾನದಲ್ಲಿ ನಡೆಸಲಾಗಿದೆ. ದೊಡ್ಡ ಸೇತುವೆ ನಿರ್ಮಿಸಲು ಸುಮಾರು 3 ಕೋಟಿ ವೆಚ್ಚದ ಟೆಂಡರ್ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಮೇಲಿಂದ ಮೇಲೆ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿರುವುದಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು, ನೌಕರರು, ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಹೊಸ ಸೇತುವೆಗೆ ಆಗ್ರಹ: ನಡುನೀರಿನಲ್ಲಿ ನಿಂತ ಸೇತುವೆಯಿಂದ ರಸ್ತೆವರೆಗೂ ಸಂಪರ್ಕ ಕಲ್ಪಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸರಕಾರ ಈಗಾಗಲೇ ರಸ್ತೆ ಮತ್ತು ಸೇತುವೆ ಅಭಿವೃದ್ಧಿಗಾಗಿ 6.29 ಕೋಟಿ ರೂ. ಅನುದಾನ ನೀಡಿದೆ. ಆದರೆ ಇನಾಮಹೊಂಗಲ ಗ್ರಾಮಸ್ಥರು ಈಗಿರುವ ಸೇತುವೆಯನ್ನು ಸಂಪೂರ್ಣ ತೆರವುಗೊಳಿಸಿ ಅಖಂಡ ಸೇತುವೆಗಾಗಿ ಬೇಡಿಕೆಯಿಟ್ಟಿದ್ದಾರೆಂದು ತಿಳಿದು ಬಂದಿದೆ. ಸದ್ಯಕ್ಕೆ ನೀರಿನ ಹರಿವು ನಿಲ್ಲುವವರೆಗೂ ಸವದತ್ತಿ-ಧಾರವಾಡ-ಹುಬ್ಬಳ್ಳಿ ಮಾರ್ಗದ ಪ್ರಯಾಣಿಕರು ಮತ್ತೆ ಕರೀಕಟ್ಟಿ ಮಾರ್ಗವಾಗಿ ಸುತ್ತುವರೆದು ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ದಾರೆ.