Advertisement

 ಕೆ.ರಾಮ ಭಟ್‌ ಅವರ ಪತ್ನಿ ಸವಿತಾ ಆರ್‌. ಭಟ್‌ ಸ್ಮರಿಸಿಕೊಳ್ಳುತ್ತಾರೆ

02:02 PM Apr 07, 2018 | |

ಪುತ್ತೂರು: 1975ರಿಂದ 77ರ ವರೆಗೆ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದ ದಿನಗಳು. ಸಂಘಟನೆ ಕೆಲಸದಲ್ಲಿ ನಿರತರಾಗಿದ್ದ ಉರಿಮಜಲು ರಾಮ ಭಟ್‌ ಭೂಗತರಾಗುವ ಅನಿವಾರ್ಯ ಎದುರಾಯಿತು. ಆಗ ಮನೆಗೆ ಬರುತ್ತಿದ್ದ ಪೊಲೀಸರು, ಸಿಐಡಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ರಾಮ ಭಟ್‌ ಅವರ ಪತ್ನಿ ಕೆ. ಸವಿತಾ ಆರ್‌. ಭಟ್‌ ನೆನಪು ಬಿಚ್ಚಿಟ್ಟರು.

Advertisement

ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದ 21 ತಿಂಗಳು ಭಯ ಹುಟ್ಟಿಸುವಂತಿತ್ತು. ಕೂಡು ಕುಟುಂಬದಲ್ಲಿ ಬದುಕುತ್ತಿದ್ದ ನಾವು, ಪುತ್ತೂರು ಪೇಟೆಯ ಕೊಂಬೆಟ್ಟು ಬಳಿ ಮನೆ ಮಾಡಿದ್ದೆವು. ಮನೆಯಲ್ಲಿ ನಾನು, ಮೂವರು ಮಕ್ಕಳು, ಭಾವನ ಇನ್ನಿಬ್ಬರು ಮಕ್ಕಳಷ್ಟೇ ಈ ಸಂದರ್ಭ ಇದ್ದೆವು. ಮನೆಗೆ ನೆಂಟರು, ನೆರೆಹೊರೆಯವರು ಬರುತ್ತಿರಲಿಲ್ಲ. ಪೊಲೀಸರು ವಿಚಾರಣೆಗೆ ಕರೆದೊಯ್ಯುತ್ತಾರೆ ಎಂಬ ಭಯ. ಮನೆ ನಿರ್ವಹಣೆ ಜವಾಬ್ದಾರಿ ರಾಮ ಭಟ್‌ ಅವರ ಅಣ್ಣ ನಾರಾಯಣ ಭಟ್‌ ಅವರ ಹೆಗಲ ಮೇಲಿತ್ತು.

ಪ್ರತಿದಿನ ಮನೆಗೆ ಬರುತ್ತಿದ್ದ ಪೊಲೀಸರು, ಸಿಐಡಿ ತಂಡ ನಮ್ಮನ್ನು ಪರಿಪರಿಯಾಗಿ ವಿಚಾರಣೆ ನಡೆಸುತ್ತಿದ್ದರು. ಇದೇ ದೊಡ್ಡ ಮಾನಸಿಕ ಹಿಂಸೆ. ಮಕ್ಕಳೆಲ್ಲರೂ ಶಾಲೆಗಳಿಗೆ ಹೋಗುವ ಹಗಲಿನ ಸಂದರ್ಭ, ಮನೆಯಲ್ಲಿ ನಾನೊಬ್ಬಳೇ ಇರುತ್ತಿದೆ. ನನ್ನ ಭಯ ಮೇರೆ ಮೀರಿತ್ತು. ಭೂಗತರಾಗಿದ್ದ ರಾಮ ಭಟ್‌ ಅವರ ತಂಡ ಪುತ್ತೂರು ಪೇಟೆಯಲ್ಲಿ ಒಂದು ದಿನ ಮೆರವಣಿಗೆ ಹೊರಟರು. ಮೊದಲೇ ಕಾದು ಕುಳಿತಿದ್ದ ಪೊಲೀಸರು ಅವರನ್ನು ಮೀಸಾದಡಿ ಬಂಧಿಸಿದರು. ಬಳ್ಳಾರಿ ಜೈಲಿಗೆ ತಳ್ಳಲಾಯಿತು. ಸುಮಾರು 1 ವರ್ಷ 3 ತಿಂಗಳು ಜೈಲಿನಲ್ಲಿದ್ದರು.

ಶಾಸಕರಾಗುವ ಮೊದಲು ಹಾಗೂ ಬಳಿಕ ಎಂದೂ ಮನೆಗೆ ಸಮಯ ಕೊಟ್ಟವರಲ್ಲ. ಇಡೀ ದಿನ ಸಾಮಾಜಿಕ ಕಳಕಳಿಯ ಕೆಲಸಗಳಲ್ಲೇ ಭಾಗಿಯಾಗಿದ್ದರು. ವಿವೇಕಾನಂದ ಕಾಲೇಜು ಆರಂಭಕ್ಕೆ ತುಂಬಾ ಓಡಾಟ ನಡೆಸಿದ್ದಾರೆ. ಇವರ ಎಲ್ಲ ಕೆಲಸಕ್ಕೂ ತುಂಬು ಪ್ರೋತ್ಸಾಹ ನೀಡಿದವರು ಅವರ ಅಣ್ಣ ನಾರಾಯಣ ಭಟ್‌. ತಂದೆ ಶಂಕರ ಭಟ್‌ ಕೂಡು ಕುಟುಂಬದ ಯಜಮಾನ. ತಾಯಿ ಗೌರಮ್ಮ ಗೃಹಿಣಿ. ಭಾವ ಧೈರ್ಯ ನೀಡದೆ ಇರುತ್ತಿದ್ದರೆ, ರಾಮ ಭಟ್‌ ಮುಂದೆ ಬರಲು ಸಾಧ್ಯ ಆಗುತ್ತಿರಲಿಲ್ಲವೇನೋ.

ಉರಿಮಜಲಿನಲ್ಲಿ ಕೂಡು ಕುಟುಂಬದಲ್ಲಿ ವಾಸವಾಗಿದ್ದೆವು. ರಾಮ ಭಟ್‌ ಅವರ ದೊಡ್ಡಪ್ಪನ ಮಗ ವೆಂಕಪ್ಪಯ್ಯ ಕಾಂಗ್ರೆಸ್‌ನ ದೊಡ್ಡ ನಾಯಕ. ಆಗ ಜನ ಸಂಘ ಬೆಳೆದಿರಲಿಲ್ಲ. ಗಾಂಧಿ ಕೊಂದ ಪಕ್ಷದವರು ಎಂದೇ ಮೂದಲಿಸುತ್ತಿದ್ದರು. ಸರಿಯಾದ ಪಕ್ಷವೇ ಅಲ್ಲ. ಕೆಲಸಕ್ಕೆ ಬಾರದವರು ಎನ್ನುತ್ತಿದ್ದರು. ಯಾರೂ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಆದ್ದರಿಂದ ರಾಮ ಭಟ್‌ ಅವರ ಕೆಲಸಕ್ಕೆ ಎಲ್ಲೂ ಅಡ್ಡಿಯಾಗಿಲ್ಲ. ರಾಮ ಭಟ್‌ ಬಳಿಕವೇ ಮನೆಯಲ್ಲಿ ಜನಸಂಘ, ಬಿಜೆಪಿ ಪ್ರವೇಶ ಪಡೆಯಿತು.

Advertisement

ಜನಸಂಘದ ಮುಂಚೂಣಿ ನಾಯಕ ದೀನ ದಯಾಳ್‌ ಉಪಾಧ್ಯಾಯ ಪಕ್ಷದ ಕೆಲಸಕ್ಕೆಂದು ಬಂದವರು ಒಂದೆರಡು ದಿನ ಮನೆಯಲ್ಲಿ ಉಳಿಯುತ್ತಿದ್ದರು. ಆಡ್ವಾಣಿ ಅವರು ಕೂಡ ಮನೆಗೆ ಬಂದಿದ್ದರು.

ಪ್ರಚಾರ ಕಾರ್ಯದಲ್ಲಿ ಭಾಗಿ
ಪತಿಯ ರಾಜಕೀಯ ಜೀವನ ನೋಡಿಯೇ ಸಾಕಾಗಿತ್ತು. ಆದರೂ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದೇನೆ. ಕೆಲವರಿಂದ ಉತ್ತಮ ಪ್ರತಿಕ್ರಿಯೆ, ಸಾಗಹಾಕಿದವರೂ ಇದ್ದಾರೆ. ಇದರ ಪರಿಣಾಮವೋ ಏನೋ, ಪುತ್ತೂರು ಮಹಿಳಾ ಕೋ- ಆಪರೇಟಿವ್‌ ಸೊಸೈಟಿಯ ನಿರ್ದೇಶಕಿಯಾಗಿ, 8 ವರ್ಷ ಅಧ್ಯಕ್ಷೆಯಾಗಿ ದುಡಿಯಲು ಅವಕಾಶ ಸಿಕ್ಕಿತು. ಕಳೆದ ನಾಲ್ಕು ವರ್ಷದಿಂದ ವಿಶ್ರಾಂತಿಯಲ್ಲಿದ್ದೇನೆ.

ರಾಮ ಭಟ್‌ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂಬ ತೃಪ್ತಿ ನನಗೆ ಆಗಲೇ ಇತ್ತು. ಹಲವರಿಗೆ ಸಹಾಯ ನೀಡಿದ್ದಾರೆ. ಸಹಾಯ ಪಡೆದವರು ಈಗಲೂ ಅದನ್ನು ನೆನಪು ಮಾಡಿಕೊಳ್ಳುತ್ತಾರೆ. ಆಗ ಹಳ್ಳಿ ಪ್ರದೇಶ ಹೆಚ್ಚು. ದೂರದೂರಿನಿಂದ ಬಂದವರು 4-5 ದಿನ ಮನೆಯಲ್ಲಿ ನಿಂತು ಹೋದವರಿದ್ದಾರೆ. ಆದರೂ ಆಗಿನ ರಾಜಕೀಯದಲ್ಲಿ ನೀತಿ, ನಿಯಮವಿತ್ತು. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದರು. ಈಗಿನ ರಾಜಕೀಯದಲ್ಲಿ ಇದ್ಯಾವುದೂ ಇಲ್ಲ. ಆದ್ದರಿಂದ ಬೇಸರ ಎನಿಸಿದೆ. ಹಿಡಿದ ಕೆಲಸವನ್ನು ಮಾಡಿ ತೀರಿಯೇ ಬಿಡಬೇಕು ಎಂಬ ಹಠವನ್ನು ಎಷ್ಟೋ ಬಾರಿ ರಾಮ ಭಟ್‌ ಅವರಲ್ಲಿ ಕಂಡಿದ್ದೇನೆ.
-ಕೆ. ಸವಿತಾ ಆರ್‌. ಭಟ್‌

ಗಣೇಶ್‌ ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next