ಇಲಿಯ ಮೇಲೆ ಸವಾರಿ ಮಾಡುವ ಗಣಪತಿಯ ಕತೆ ಎಲ್ಲರಿಗೂ ಗೊತ್ತಿದೆ. ಅದಕ್ಕೇ ಅವನನ್ನು ಮೂಷಿಕ ವಾಹನ ಎಂದು ಕರೆಯುವುದು. ಆದರೆ, ವಾಹನದಲ್ಲಿ ಮೂಷಿಕಗಳನ್ನು ಸಾಕಿದ ಮಹಾತಾಯಿಯ ಬಗ್ಗೆ ಕೇಳಿದ್ದೀರಾ?
ಕ್ಯಾಲಿಫೋರ್ನಿಯಾ ಬಳಿಯ ಕಾರ್ಲ ಎಂಬಾಕೆಯ ಕತೆ ಇದು. ಆಕೆ, ಪಾರ್ಕ್ ಮಾಡಿದ್ದ ತನ್ನ ವ್ಯಾನ್‌ನಲ್ಲಿ ಇಲಿಗಳನ್ನು ಸಾಕಿಕೊಂಡಿದ್ದಳು. ದನ-ಕರು, ನಾಯಿ, ಬೆಕ್ಕುಗಳನ್ನು ಮುದ್ದಾಗಿ ಸಾಕುವಂತೆ ಈ ಇಲಿಗಳಿಗೂ ನೀರು-ಆಹಾರ ಕೊಟ್ಟು ಬೆಳೆಸಿದ್ದಳು. ಕಾರ್ಲ. ಆ ಇಲಿಗಳ್ಳೋ, ಕಾರಿನ ಸೀಟ್‌ಗಳನ್ನು ಕೊರೆದು, ಸೀಟಿನ ಅಡಿ ನುಗ್ಗಿ ದಾಂಧಲೆ ನಡೆಸುವುದಲ್ಲದೆ, ಹೊರಗೂ-ಒಳಗೂ ಓಡಾಡುತ್ತ ಸ್ಥಳೀಯರಿಗೆ ಕಾಟ ಕೊಡತೊಡಗಿದವು. ಆಗ, ಸುತ್ತಮುತ್ತಲಿನವರಿಂದ ಸ್ಥಳೀಯ ಸರ್ಕಾರಕ್ಕೆ ದೂರು ಹೋಯ್ತು. ಇಲಿ ಕಾಟ ಅಂತ ನಿರ್ಲಕ್ಷಿಸಿದ ಅವರಿಗೆ, ಪರಿಸ್ಥಿತಿಯ ಗಂಭೀರತೆ ಅರ್ಥವಾಗಿದ್ದು ಆಕೆ 300ಕ್ಕೂ ಹೆಚ್ಚು ಇಲಿಗಳನ್ನು ಸಾಕಿದ್ದಾಳೆ ಅಂತ ಗೊತ್ತಾದಾಗ!
ಪಾಪ, ಆಕೆಗೂ ಇಲಿಗಳ ಸಂಖ್ಯೆ ಇಷ್ಟೊಂದಾಗುತ್ತೆ ಎಂದು ಗೊತ್ತಿರಲಿಲ್ಲ. ಯಾಕಂದ್ರೆ, ಆಕೆ ಸಾಕಿದ್ದು 2 ಇಲಿಗಳನ್ನು ಮಾತ್ರ. ನಾಲ್ಕೇ ವಾರಕ್ಕೆ ಸಂತಾನೋತ್ಪತ್ತಿ ಮಾಡುವ, ಒಂದು ಬಾರಿ ಏಳೆಂಟು ಮರಿಗಳನ್ನು ಹಾಕುವ ಇಲಿಗಳ ಸಂಖ್ಯೆ ಕೆಲವೇ ದಿನಗಳಲ್ಲಿ ಮುನ್ನೂರು ದಾಟಿಬಿಟ್ಟಿತು. ಇಲಿಗಳ ಕಾಟ ತಡೆಯದಾದಾಗ, ಅವುಗಳನ್ನು ಬಿಟ್ಟುಕೊಡಲು ಆಕೆ ಒಪ್ಪಿಕೊಂಡಳು. ವ್ಯಾನ್ ಒಳಗೆ ನುಗ್ಗಿದ ಅಧಿಕಾರಿಗಳಿಗೆ, ಕೈ ಹಾಕಿದಲ್ಲೆಲ್ಲಾ ಇಲಿಗಳು ಸಿಕ್ಕವಂತೆ. ಒಟ್ಟು 320 ಇಲಿಗಳನ್ನು ಹೊರಗೆ ತೆಗೆಯಬೇಕಾದರೆ ಅವರಿಗೆ ಸಾಕೋ ಸಾಕಾಗಿತ್ತು.