ತಿಂಗಳಿಗೊಮ್ಮೆಯಾದರೂ ಕಾರಣ ನಿಮಿತ್ತ ನಾನು ಬೆಂಗಳೂರಿಗೆ ಹೋಗುವುದು ರೂಢಿ. ಅಂದು ಕೂಡ ನಮ್ಮೂರಿನಿಂದ ಮಹಾನಗರಿಗೆ ಹೊರಡಲು ಸ್ಲಿಪರ್ ಕೋಚ್ ಬಸ್ ಹತ್ತಿದ್ದೆ. ಸೀಟ್ ಬುಕ್ ಮಾಡುವಾಗ, ಬಸ್ಸಿನ ಸ್ಥಿತಿಗತಿ ತಿಳಿಯುವಂತಿದ್ದರೆ ಚೆನ್ನಾಗಿರುತ್ತದೆ ಅಂತ ಅನಿಸಿದ್ದೇ ಆವತ್ತು. ಈ ಮಾತು ಏಕೆ ಅನ್ನೋಕ್ಕಿಂತ ಮುಂದೆ ಏನಾಯ್ತು ಅಂತ ನೋಡಿ…ಆ ಬಸ್ಸೋ ಹಳೆಯದು. ಅದನ್ನು ಹತ್ತಿದ ಮೇಲೆಯೇ ನಮಗೆ ತಿಳಿದದ್ದು. ಅದರ ಬಿಡಿ ಬಾಗಗಳೆಲ್ಲ ಗಡಗಡ ಅಲುಗಾಡುತಿದ್ದವು. ಹೀಗಾಗಿ, ರಾತ್ರಿ ಪೂರಾ ನಿದ್ರೆ ಇಲ್ಲ. ನೂರು ಕಿ.ಮೀ ಹೋಗುವಷ್ಟರಲ್ಲಿ ಎರಡು ಮೂರು ಸಲ ಅಲ್ಲಲ್ಲಿ ಕೆಟ್ಟು ನಿಂತಿತು. ಕಂಡಕ್ಟರ್, ಡ್ರೈವರ್ ತಮಗೆ ಗೊತ್ತಿದ್ದ ಬುದ್ಧಿಮತ್ತೆಯಿಂದ ರಿಪೇರಿ ಮಾಡಿದರಾದರೂ ಬಸ್ ವೇಗವಾಗಿ ಏನೂ ಹೋಗುತ್ತಿರಲಿಲ್ಲ. ಹೀಗೆ ಹೋದರೆ, ಬೆಂಗಳೂರು ತಲುಪುವುದು ಯಾಕೋ ಕಷ್ಟವೆನಿಸತೊಡಗಿತು.
ಯಾವ ಮಟ್ಟಕ್ಕೆ ಎಂದರೆ, ಈ ಬಸ್ಸಲ್ಲಿ ಕೂತರೂ ಎತ್ತಿನ ಗಾಡಿಯ ಪ್ರಯಾಣದ ಅನುಭವವಾಗತೊಡಗಿತು. ಹಾಗೂ ಹೀಗೂ, ನಸುಕಿನ ಐದು ಗಂಟೆ ಹೊತ್ತಿಗೆ ಬಸ್ ತುಮಕೂರು ತಲುಪಿತು. ಈ ಸಮಯದಲ್ಲಿ ಪ್ರಯಾಣಿಕರೆಲ್ಲರೂ ಗಾಡ ನಿದ್ದೆಯಲ್ಲಿದ್ದರು. ಹಿಂದೆ ಮಲಗಿದ್ದ ಸಹ ಪ್ರಯಾಣಿನೊಬ್ಬನಿಗೆ ತಾನು ಮಲಗಿದ ಬೆಡ್ಡಿನ ಕೆಳಗೆ ಏನೋ ಬಿಸಿ ಬಿಸಿ ಆದಂತಾಯಿತು. ಅವನಿಗೆ ಏನನಿಸಿತೋ, ಏನು ಊಹಿಸಿದನೋ… ಎದ್ದವನೇ ದೊಡ್ಡ ದನಿಯಲ್ಲಿ, “ಎಲ್ಲರು ಇಳೀರಿ. ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಬೇಗ ಇಳೀರಿ’ ಎಂದು ಚೀರತೊಡಗಿದ. ನಿದ್ದೆಯಲ್ಲಿದ್ದ ನನಗೆ ಸಣ್ಣಗೆ ಯಾರೋ ಕೂಗಿದಂತೆ ಕೇಳುತ್ತಿತ್ತು. ಮರುಕ್ಷಣವೇ ಎಲ್ಲರೂ ದಡಬಡಿಸಿ ಎದ್ದರು. ಕೊನೆಗೆ ಎದ್ದೆನೊ…ಬಿದ್ದೆನೋ ಅಂತ ಕಿರುಚುತ್ತಾ ತಮ್ಮ ವಸ್ತುಗಳನ್ನು ಅಲ್ಲಿಯೆ ಬಿಟ್ಟು, ಕೆಳಗಿಳಿದು ಓಡಲು ಶುರುಮಾಡಿದರು.
ಎಲ್ಲರೂ ಇಳಿದು, ಒಂದಷ್ಟು ಮೀಟರ್‌ಗಳಷ್ಟು ದೂರದಲ್ಲಿ ನಡೆದು ಹೋಗುತ್ತಿರುವಾಗಲೇ ಬೆಂಕಿಯ ಜ್ವಾಲೆಯಲ್ಲಿ ಬಸ್ಸೇ ಉರಿಯತೊಡಗಿತು. ಕೆಂಪು ಕೆನ್ನಾಲಿಗೆಯಲ್ಲಿ ಆಕಾಶದೆತ್ತರಕ್ಕೆ ಹೊಗೆ ಸೂಸುತ್ತಿದ್ದ ಅವಘಡವನ್ನು ಕಣ್ಣ ಮುಂದೆಯೇ ಕಂಡವರು ಅವಾಕ್ಕಾದರು. ಆವತ್ತು ಅಪಾಯವನ್ನು ಗ್ರಹಿಸಿ, ಪದೇ ಪದೆ ಕೂಗು ಹಾಕಿ ಎಲ್ಲರನ್ನೂ ಎಬ್ಬಿಸಿ, ಬಸ್‌ನಲ್ಲಿದ್ದ ಎಲ್ಲರ ಜೀವ ಉಳಿಸಿದ ಆ ಅನಾಮಿಕ ಸಹ ಪ್ರಯಾಣಿಕನಿಗೆ ಶರಣು.
ಅಂಬಿ ಎಸ್ ಹೈಯ್ನಾಳ್,ಮುದನೂರ .ಕೆ