Advertisement

ಭೋಪಾಲ ದುರಂತ ಮರುಕಳಿಸದಂತೆ ಎಚ್ಚರ: ಡಾ|ಸಾರಂಗಿ

11:28 AM Dec 22, 2018 | Team Udayavani |

ಮಂಗಳೂರು: ಭೋಪಾಲ ದುರಂತದಂತಹ ಅಪಾಯಕಾರಿ ಘಟನೆಗಳು ಮಂಗಳೂರಿನಲ್ಲಿ ಸಂಭವಿಸದಂತೆ ಜನರು ಎಚ್ಚರ ವಹಿಸಬೇಕು. ಜೀವಕ್ಕೆ ವಿಷ ನೀಡಬಲ್ಲ ಕೈಗಾರಿಕೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಭೋಪಾಲ ಅನಿಲ ದುರಂತ ಸಂತ್ರಸ್ತರ ಪರ ಹೋರಾಟಗಾರ ಡಾ| ಸತಿನಾಥ ಸಾರಂಗಿ ಹೇಳಿದರು. 

Advertisement

ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರ
ವಾರ ಆಯೋಜಿಸಿದ್ದ ಎಂಆರ್‌ಪಿಎಲ್‌ ವಿಸ್ತರಣೆ ವಿರೋಧಿಸಿ “ತುಳುನಾಡು ಉಳಿಸಿ’ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಭೋಪಾಲ ಅನಿಲ ದುರಂತದಲ್ಲಿ ಸಾವಿರಾರು ಜನರು ಮೃತಪಟ್ಟರು. ಲಕ್ಷಾಂತರ ಜನರು ಇಂದಿಗೂ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಸರಕಾರ, ಜನಪ್ರತಿನಿಧಿಗಳು, ಮಾತ್ರವಲ್ಲ ನ್ಯಾಯಾಲಯದಲ್ಲೂ ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರಕಿಲ್ಲ. ಅಲ್ಪಸ್ವಲ್ಪ ನ್ಯಾಯ ಸಿಕ್ಕಿದ್ದರೆ ಅದು ಹೋರಾಟದಿಂದ ಮಾತ್ರ ಎಂದರು. 

ಎಂಆರ್‌ಪಿಎಲ್‌ ವಿಸ್ತರಣೆ ಆಗುವ ಕುತ್ತೆತ್ತೂರು ಮತ್ತು ಪೆರ್ಮುದೆಗೆ ಭೇಟಿ ನೀಡಿ ಜನರ ಜತೆ ಮಾತ ನಾಡಿದ್ದೇನೆ. ಹಚ್ಚ ಹಸುರಿನ ಪ್ರದೇಶದಲ್ಲಿ ಬೃಹತ್‌ ಕೈಗಾರಿಕೆಗೆ  ಅವಕಾಶ ನೀಡಿದ್ದರ ಕುರಿತು ಆತಂಕ ಕಾಡುತ್ತಿದೆ ಎಂದರು. 
ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷ ವಿಲಿಯಂ ಮಾತನಾಡಿ, ಕೃಷಿ ಭೂಮಿ, ಪ್ರಕೃತಿ, ಸಂಸ್ಕೃತಿಯನ್ನು ನಾವು ಉಳಿಸಬೇಕಾಗಿದೆ ಎಂದರು. ಟಿ.ಆರ್‌. ಭಟ್‌ಪ್ರಸ್ತಾವನೆಗೈದರು. ಕೃಷಿಭೂಮಿ ಸಂರಕ್ಷಣ ಸಮಿತಿಯ ಮಧುಕರ
ಅಮೀನ್‌, ಮುಹಮ್ಮದ್‌ ಕುಂಞಿ, ಮೀನುಗಾರ ಮುಖಂಡ ವಾಸುದೇವ ಬೋಳೂರು, ವಿದ್ಯಾ ದಿನಕರ್‌, ಲಾರೆನ್ಸ್‌ ಡಿ’ಸೋಜಾ ಉಪಸ್ಥಿತರಿದ್ದರು.

ಭೋಪಾಲದ ಪಾಲಿಗೆ ಕರಾಳ ರಾತ್ರಿ 
ಭೋಪಾಲದ ಪಾಲಿಗೆ 1984ರ ಡಿ.2 ಕರಾಳ ರಾತ್ರಿಯಾಗಿತ್ತು. ಕೀಟನಾಶಕ ಕಾರ್ಖಾನೆಯಿಂದ ಹೊರಹೊಮ್ಮಿದ ವಿಷಾನಿಲ 10,000ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿತ್ತು. 5 ಲಕ್ಷಕ್ಕೂ ಅಧಿಕ ಮಂದಿ ಆ ವಿಷಾನಿಲ ಸೇವಿಸಿದ್ದರು. ಮರುದಿನ ಸಾವಿರಾರು ಮೃತದೇಹಗಳು ರಸ್ತೆಗಳಲ್ಲಿ ಬಿದ್ದುಕೊಂಡಿದ್ದವು. ಸರಕಾರ ತನ್ನ ಜವಾಬ್ದಾರಿಯನ್ನು ಮರೆಮಾಚಲು ಸರಕಾರಿ ವಾಹನದ ಮೂಲಕ ಆ ಮೃತದೇಹಗಳನ್ನು ನರ್ಮದಾ ನದಿಗೆ ಎಸೆದು ಅಮಾನವೀಯತೆ ಪ್ರದರ್ಶಿಸಿತ್ತು. ಪರಿಹಾರ ರೂಪವಾಗಿ ಸತ್ತವರ ಕುಟುಂಬಕ್ಕೆ 10 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 25,000 ರೂ. ನೀಡಿತ್ತು. ಚಿಕ್ಕಾಸು ಪರಿಹಾರದಿಂದ ಔಷಧೋಪಚಾರ ಮಾಡಲಾಗದೆ ಸಾವಿಗಿಂತಲೂ ಸಂತ್ರಸ್ತರು ಭೀಕರವಾದ ಜೀವನವನ್ನು ನಡೆಸುವಂತಾಗಿದೆ. ಪರಿಹಾರದ ಬದಲಿಗೆ ಪರ್ಯಾಯ ವ್ಯವಸ್ಥೆ, ಸೂಕ್ತ ಉದ್ಯೋಗವನ್ನು ಕಲ್ಪಿಸಿದ್ದರೆ ಸಂತ್ರಸ್ತರು ನೆಮ್ಮದಿಯ ಜೀವನ ನಡೆಸಬಹುದಿತ್ತು. ಅಭಿವೃದ್ಧಿ ಹೆಸರಿನಲ್ಲಿ ರೈತರಿಂದ ಭೂಸ್ವಾಧೀನಕ್ಕಾಗಿ ಪರಿಹಾರ ನೀಡುವ ಸಂದರ್ಭ ನಮ್ಮ ಪರಿಸರ, ಭವಿಷ್ಯದ  ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಡಾ| ಸಾರಂಗಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next