ಸುರಪುರ: ಭೀಮರಾಯನಗುಡಿ ಕೆಬಿಜೆಎನ್ನೆಲ್ ಸಿಇ ವಿಭಾಗದ ಕಾಲುವೆಗಳ ಕ್ಲೂಜರ್ ಅಥವಾ ಟೆಂಡರ್ ಹಣ ಉಳಿತಾಯ ಮಾಡಬೇಕು ಎಂದು ಆಗ್ರಹಿಸಿ ಶೋಷಿತರ ಪರ ಸಂಘಟನೆಗಳ ಒಕ್ಕೂಟ ಇಲ್ಲಿಯ ಬಸ್ ನಿಲ್ದಾಣ ಎದುರು ಸೋಮವಾರ ಪ್ರತಿಭಟನೆ ನಡೆಸಿತು.
ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಕಾಲುವೆ 6ರ ಅಡಿ ಲ್ಯಾಟರಲ್ ನಂ. 12 ಸಬ್ ಲ್ಯಾಟರಲ್ 6 ಮತ್ತು 8ರ ಕಾಲುವೆಗಳು ಹಾಳಾಗಿ ಹೋಗಿದ್ದು, ರೈತರ ಜಮೀನುಗಳಿಗೆ ನೀರು ಮುಟ್ಟುತ್ತಿಲ್ಲ. ಇದು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ದೂರಿದರು. ಕಾಲುವೆ ರಿಪೇರಿ ಮಾಡಲು ಈ ಹಿಂದೆ ಕೇಂದ್ರ ಸರ್ಕಾರ ಕ್ಯಾನಲ್ ರಿ ಮಾಡಲಿಂಗ್‌ಗೆ ಹಣ ಕೊಟ್ಟಿದೆ ಮತ್ತು ಪ್ರತಿ ವರ್ಷ ಕ್ಲೂಜರ್ ಹಣ, ಸ್ಪೇಶಲ್ ರಿಪೇರಿ ಹಣ ಕೊಡುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಅವಶ್ಯಕತೆ ಇರುವ ಸ್ಥಳಗಳನ್ನು ಬಿಟ್ಟು, ತಮ್ಮ ಮನಸ್ಸಿಗೆ ಬಂದಂತೆ ಬೇರೆ ಕಡೆಗಳಲ್ಲಿ ರಿಪೇರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಕುರಿತು ಲೋಕಾಯುಕ್ತರಿಂದ ತನಿಖೆಯಾಗಬೇಕು ಎಂದರು.
ಮಾಜಿ ಸಚಿವ ಎಂ.ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಟೆಂಡರ್ ಉಳಿತಾಯದ ಈ ಭಾಗದ ಹಣವನ್ನು ಬಬಲೇಶ್ವರ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದು ನ್ಯಾಯವೇ ಎಂದು ಪ್ರಶ್ನಿಸಿದರು.
ಡಿಸ್ಟ್ರಬ್ಯೂಟರ್ 6ರ ವ್ಯಾಪ್ತಿಯ ಲ್ಯಾಟರಲ್ ನಂ.79ಎ, ಲ್ಯಾಟರಲ್ ನಂ.3, 12, ಸಬ್ ಲ್ಯಾಟರಲ್ 6 ಮತ್ತು 8 ಕಾಲುವೆಗಳು ಸಿಟಿಸಿಗಳು ಕೂಡಲೇ ಕ್ಲೂಜರ್ ಅಥವಾ ಟೆಂಡರ್ ಉಳಿತಾಯ ಹಣದಲ್ಲಿ ಮಾಡಲು ಕ್ರಮ ಕೈಗೊಳ್ಳಬೇಕು. ಅವಶ್ಯಕತೆ ಇರುವ ರೈತರಿಗೆ ತೆರೆದ ಬಾವಿ ನಿರ್ಮಾಣ, ಸಾಮೂಹಿಕ ಗಂಗಾ ಕಲ್ಯಾಣ ಯೋಜನೆ, ಪಿಕಪ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಶಹಾಪುರ ತಾಲೂಕಿನ ವನದುರ್ಗ ಕೆಬಿಜೆಎನ್ನೆಲ್ ವಸತಿ ಗೃಹಗಳು ಹಾಳಾಗಿದ್ದು, ಕೂಡಲೇ ದುರಸ್ತಿ ಮಾಡಿಸಬೇಕು ಎಂದು ತಿಳಿಸಿದರು.
ಬೇಡಿಕೆ ಈಡೇರಿಸದಿದ್ದರೆ ಫೆ. 24ಕ್ಕೆ ಮುಖ್ಯ ಅಭಿಯಂತರರ ಕಚೇರಿ ಮುಂದೆ ರೈತರ ಜತೆಯಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ, ನೀರಾವರಿ ಸಚಿವ ರಮೇಶ ಜಾರಕಿಹೊಳೆ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು.
ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಮನವಿ ಸ್ವೀಕರಿಸಿದರು. ಜೆಡಿಎಸ್ ಮುಖಂಡ ಉಸ್ತಾದ್ ವಜಾಹತ್ ಹುಸೇನ್, ಗೋಪಾಲ ಬಾಗಲಕೋಟೆ, ಮಾನಯ್ಯ ದೊರೆ, ಶರಣಪ್ಪ ಪೊಲೀಸ್ ಪಾಟೀಲ, ದೇವಿಂದ್ರಪ್ಪ ಟಿ. ಇದ್ದರು.