ಹೆಬ್ರಿ: ಕರ್ನಾಟಕದಲ್ಲೂ ನಾಟಕ, ರಂಗಭೂಮಿಗೆ ನೀಡುವ ಅನುದಾನಗಳು ಉಳ್ಳವರ ಪಾಲಾಗುತ್ತಿದೆ. ನಿಜವಾಗಿ ರಂಗಸೇವೆ, ನಾಟಕಗಳನ್ನು ಮಾಡುವವರಿಗೆ ಯಾವುದೇ ಅನುದಾನಗಳು ಸಿಗುತ್ತಿಲ್ಲ. ರಾಜ್ಯ ಮಟ್ಟದ ಅಧಿಕಾರಿಗಳಿಗೆ ಕಮಿಷನ್ ನೀಡಿ ಅನುದಾನ ಪಡೆಯುವ ವ್ಯವಸ್ಥೆ ನಮ್ಮ ಮುಂದಿದೆ. ಸರಕಾದ ರಂಗಮಂದಿರಗಳು ಉಪಯೋಗಕ್ಕೆ ಬಾರದೇ ಗೋಡಾನುಗಳಾಗಿವೆ. ರಂಗಾಯಣದ ಕಲಾವಿದರನ್ನು ಸರಕಾರಿ ನೌಕರರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ರಂಗ ನಿರ್ದೇಶಕ ನಾಗರಾಜಮೂರ್ತಿ ಹೇಳಿದರು.
ಮಾ. 13ರಂದು ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ 9 ದಿನಗಳ ಕಾಲ ನಡೆದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪದಲ್ಲಿ ನೀಡಿದ ಮುದ್ರಾಡಿ ನಾಟ್ಕ ಸಮ್ಮಾನ 2019 ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಇಂದು ಭಾರತದಾದ್ಯಂತ ರಂಗಭೂಮಿ ಮತ್ತು ರಂಗ ಸಂಸ್ಕೃತಿ ಉಳಿದಿದ್ದರೆ ಅದು ಮುದ್ರಾಡಿಯಂತಹ ಗ್ರಾಮೀಣ ಪ್ರದೇಶದ ರಂಗಸಂಸ್ಥೆ ಮತ್ತು ದಕ್ಷಿಣ ಭಾರತದ ಪ್ರಸಿದ್ಧ ರಂಗ ನಿರ್ದೇಶಕ ಕೆ.ವಿ. ನಾಗರಾಜಮೂರ್ತಿ ಅವರಿಂದ. ನಾಗರಾಜಮೂರ್ತಿ ರಂಗಸೇವೆಯಲ್ಲಿ ಇರದಿದ್ದರೆ ರಂಗಭೂಮಿ ಬರಿದಾಗುತ್ತದೆ ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಎಚ್.ಎಸ್. ಶಿವಪ್ರಕಾಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಮತುಳುವೆರ್ ಕಲಾ ಸಂಘಟನೆಯ ಸಂಸ್ಥಾಪಕ ಧರ್ಮಯೋಗಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ, ತಂಜಾವೂರಿನ ಉಮಾಶಂಕರ್, ಉದ್ಯಮಿ ಡಾ| ಆರೂರು ಪ್ರಸಾದ ರಾವ್, ವಾಣಿ ಸುಕುಮಾರ್, ಸುಗಂಧಿ ಉಮೇಶ ಕಲ್ಮಾಡಿ ಉಪಸ್ಥಿತರಿದ್ದರು.
ನಮತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಸ್ವಾಗತಿಸಿ, ಸಂಘಟನ ಕಾರ್ಯ ದರ್ಶಿ ಜಗದೀಶ ಜಾಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ದೊಡ್ಡ ಕೆಲಸ
ಮುದ್ರಾಡಿಯಂತಹ ಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ, ರಂಗೋತ್ಸವದಂತಹ ರಾಷ್ಟ್ರೀಯ ರಂಗ ಚಟುವಟಿಕೆಗಳ ದೊಡ್ಡ ಕೆಲಸ ನಿರಂತರವಾಗಿ ನಡೆಯುತ್ತಿದೆ. ರಂಗಭೂಮಿಯ ಮೇಲಿನ ಪ್ರೀತಿಯಿಂದ ಮಾತ್ರ ಇಂತಹ ಸೇವೆ ಸಾಧ್ಯ ಎಂದು ನಾಗರಾಜಮೂರ್ತಿ ಹೇಳಿದರು.