ಉಡುಪಿ: ಇಂದು ಕನ್ನಡ ಭಾಷಾ ಪ್ರಾಂತ್ಯ ಸ್ಥಾಪನೆಗಾಗಿ ಯಾವುದೇ ಹೋರಾಟ ಅನಿವಾರ್ಯವಿಲ್ಲ. ಬದಲಾಗಿ ಕನ್ನಡ ಭಾಷೆಯನ್ನು ಬೆಳೆಸಿ, ಅಭಿವೃದ್ಧಿಪಡಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವುದು ಬಹುದೊಡ್ಡ ಸವಾಲಾಗಿದೆ. ಕಂಪ್ಯೂಟರ್ ಯುಗವಾಗಿ ಪರಿಣಮಿಸುತ್ತಿರುವ ಈ ಆಧುನಿಕ ಯುಗದಲ್ಲಿ ನಾಡಿನ ಜನರು ತಮ್ಮ ಭಾಷಾ ಸ್ವಾಭಿಮಾನವನ್ನು ತೊರೆದು ಅನ್ಯ ಭಾಷೆಗಳತ್ತ ವಾಲುತ್ತಿದ್ದಾರೆ. ಈ ಕಾರಣಕ್ಕೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಅಜ್ಜರಕಾಡು ಮೈದಾನದಲ್ಲಿ ರವಿವಾರ ನಡೆದ 65ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.
ತುಳು ಭಾಷೆ ಇಲ್ಲಿನ ಆಡು ಭಾಷೆಯಾದರೂ ಆಡಳಿತ ಮತ್ತು ಶಿಕ್ಷಣದ ಭಾಷೆಯಾಗಿ ಕನ್ನಡವನ್ನೇ ಜನ ಬಳಸಿದ್ದಾರೆ. ಈ ದೃಷ್ಟಿಯಿಂದ ತುಳು ಮತ್ತು ಕನ್ನಡ ಎರಡು ಕಣ್ಣುಗಳಿದ್ದಂತೆ. ಎರಡನ್ನೂ ಒಟ್ಟಾಗಿ ಬೆಳೆಸಬೇಕಾದುದು ನಮ್ಮ ಕರ್ತವ್ಯ. ನಮ್ಮ ಹಿರಿಯರು ಈ ಕರ್ತವ್ಯವನ್ನು ಚೆನ್ನಾಗಿ ಮಾಡಿದ್ದಾರೆ. ಇದನ್ನು ಮುಂದುವರಿಸಬೇಕಾದದ್ದು ನಮ್ಮ ಜವಾಬ್ದಾರಿ ಎಂದರು.
ಉತ್ತಮ ಆರೋಗ್ಯ ಸೇವೆ
ಉಡುಪಿ ಜಿಲ್ಲೆಯಾಗಿ 23 ವರ್ಷಗಳು ಕಳೆದಿವೆ. ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾದ ಜಿಲ್ಲಾಸ್ಪತ್ರೆಯನ್ನು 250 ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರಕಾರದಿಂದ ಅನುಮೋದನೆ ದೊರೆತಿರುವುದು ನಿಜಕ್ಕೂ ಜಿಲ್ಲೆಯ ಜನತೆಗೆ ಹರ್ಷದ ಸಂಗತಿ. ಈ ಮೂಲಕ ಸರಕಾರದಿಂದ ಸುಮಾರು 115 ಕೋ.ರೂ. ವೆಚ್ಚದಲ್ಲಿ ಕಟ್ಟಡ ಮತ್ತು 250 ಬೆಡ್, ಆಸ್ಪತ್ರೆಗೆ ಬೇಕಾದಷ್ಟು 197 ಸಿಬಂದಿ, ಪೀಠೊಪಕರಣ ದೊರಕುವಂತಾಗಿದೆ. ಇದರಿಂದಾಗಿ ಜನರಿಗೆ ಇನ್ನೂ ಹೆಚ್ಚಿನ ಹಾಗೂ ಉತ್ತಮ ರೀತಿಯಲ್ಲಿ ಆರೋಗ್ಯ ಸೇವೆಗಳನ್ನು ಲಭ್ಯವಾಗಿಸಲು ಸಹಕಾರಿಯಾಗಲಿದೆ ಎಂದರು.
ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಜಿ.ಪಂ. ಸಿಇಒ ಡಾ| ನವೀನ್ ಭಟ್, ಎಸ್ಪಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಕಾರ್ಯ ಕ್ರಮದ ನೇರಪ್ರಸಾರವನ್ನು ಸಾರ್ವಜನಿಕರು ಮನೆಯಿಂದಲೇ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ಎಲ್ಲ ಬೀಚ್‌ಗಳಿಗೂ ಅಂತಾ ರಾಷ್ಟ್ರೀಯ ಮಾನ್ಯತೆ ಯತ್ನ
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಪ್ರತಿಷ್ಠಿತ “ಅಂತಾರಾಷ್ಟ್ರೀಯ ಬ್ಲೂ ಫ್ಲಾಗ್’ ಪ್ರಮಾಣ ಪತ್ರದ ಮಾನ್ಯತೆಯು ಜಿಲ್ಲೆಯ ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್‌ಗೆ ದೊರೆತಿರುವುದು ಉಡುಪಿ ಜಿಲ್ಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಜಿಲ್ಲೆಯ ಇನ್ನಿತರ ಬೀಚ್‌ಗಳಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಾಚರಿಸಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.