Advertisement

ಉಳಿಸಿ ಬೆಳೆಸುವ ಹೋರಾಟ

06:03 PM Jul 06, 2018 | Team Udayavani |

ತನ್ನನ್ನು ದತ್ತು ನೀಡಿದ ತಾಯಿಯನ್ನು ನೋಡಲು ಮಗಳು ವಿದೇಶದಿಂದ ಊರಿಗೆ ಬರುತ್ತಾಳೆ. ಇತ್ತ ಕಡೆ ನವಜೋಡಿಯೊಂದು ಇಲ್ಲಿನ ಸಹವಾಸವೇ ಬೇಡ, ವಿದೇಶಕ್ಕೆ ಹೋಗಿ ನೆಲೆ ಕಂಡುಕೊಳ್ಳುವ ಎಂದು ನಿರ್ಧರಿಸಿ, ಓಡಾಡುತ್ತಿರುತ್ತದೆ. ಮತ್ತೂಂದು ಕಡೆ ಪುಟ್ಟ ಬಾಲಕಿಯೊಬ್ಬಳು ಬಾಗಿಲು ಮುಚ್ಚಿದ ತನ್ನೂರು ಸರ್ಕಾರಿ ಶಾಲೆ ಮತ್ತೆ ಆರಂಭವಾಗಬೇಕು ಎಂದು ಕನಸು ಕಾಣುತ್ತಾಳೆ. ಹೀಗೆ ಮೂರು ಟ್ರ್ಯಾಕ್‌ಗಳೊಂದಿಗೆ “ಅಸತೋಮ ಸದ್ಗಮಯ’ ಚಿತ್ರ ತೆರೆದುಕೊಳ್ಳುತ್ತದೆ.

Advertisement

ಆದರೆ, ಅಂತಿಮವಾಗಿ ನದಿಗಳೆಲ್ಲಾ ಸಮುದ್ರ ಸೇರಿದಂತೆ ಕೊನೆಗೆ ಮೂರು ಟ್ರ್ಯಾಕ್‌ಗಳ ಆಶಯ ಒಂದೇ ಆಗುತ್ತದೆ. ನಿರ್ದೇಶಕರ ಕಥೆ ಹಾಗೂ ಅದರ ಉದ್ದೇಶ ಚೆನ್ನಾಗಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಿಹಾಕುವಲ್ಲಿನ ಮಾಫಿಯಾ ಕೈವಾಡ, ಬದಲಾಗಬೇಕಾದ ಶಿಕ್ಷಣ ವ್ಯವಸ್ಥೆಯನ್ನಿಟ್ಟುಕೊಂಡು ನಿರ್ದೇಶಕರು ಕಥೆ ಮಾಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ.

ಹಾಗಾಗಿ, ಅವರ ಕಥೆ ಈಗಿನ ಪರಿಸ್ಥಿತಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಶಿಕ್ಷಣ ಎಂದರೆ ಕೇವಲ ರ್‍ಯಾಂಕ್‌ ಪಡೆಯೋದಷ್ಟೇ ಅಲ್ಲ, ಅದರಾಚೆಗಿನ ಕಲಿಕೆ ಸಾಕಷ್ಟಿದೆ, ಮಕ್ಕಳಿಗೆಗ ಮಾರ್ಕ್ಸ್ನ ಹೊರೆಯನ್ನು ಹೊರಿಸಿ, ಅವರ ಬಾಲ್ಯವನ್ನು ಕಿತ್ತುಕೊಳ್ಳಬೇಡಿ ಅಂಶವನ್ನು ಇಲ್ಲಿ ಹೇಳಲಾಗಿದೆ. ಇಂತಹ ಗಂಭೀರ ವಿಷಯದ ಮಧ್ಯೆ ನಿರ್ದೇಶಕರು ಮತ್ತೂಂದು ಅಂಶವನ್ನು ಸೇರಿಸಿದ್ದಾರೆ. ಅದು ತಾಯಿ ಸೆಂಟಿಮೆಂಟ್‌.

ಹಾಗಾಗಿ, ಸಿನಿಮಾ ಆರಂಭವಾಗಿ ಸ್ವಲ್ಪ ಹೊತ್ತಿನವರೆಗೆ ಇದು ತಾಯಿ-ಮಗಳ ಸೆಂಟಿಮೆಂಟ್‌ ಸಿನಿಮಾನಾ ಎಂಬ ಅನುಮಾನ ಮೂಡದೇ ಇರದು. ಆ ಮಟ್ಟಿಗೆ ಅವರು “ಸೆಂಟಿಮೆಂಟ್‌’ ವಿಷಯವನ್ನು ಬೆಳೆಸಿಕೊಂಡು ಹೋಗಿದ್ದಾರೆ. ಆದರೆ, ಒಂದು ಹಂತಕ್ಕೆ ಆ ಟ್ರ್ಯಾಕ್‌ ಅನ್ನು ಬದಿಗೊತ್ತಿ ಶಿಕ್ಷಣ ವ್ಯವಸ್ಥೆಯತ್ತ ಗಮನಹರಿಸಿದ್ದಾರೆ. ಅತ್ತ ಕಡೆ ಮನುಷ್ಯ ಸಂಬಂಧದ ಮೌಲ್ಯವನ್ನು ಹೇಳಬೇಕು, ಇತ್ತ ಕಡೆ ಮಾಫಿಯಾವೊಂದನ್ನು ಬಿಚ್ಚಿಡಬೇಕೆಂಬ ಉದ್ದೇಶದೊಂದಿಗೆ ಸಿನಿಮಾ ಮಾಡಿದಂತಿದೆ.

ಅದೇ ಕಾರಣದಿಂದ ಪ್ರೇಕ್ಷಕ ಮೂಡ್‌ ಕೂಡಾ ಆಗಾಗ ಬದಲಾಗುತ್ತಿರುತ್ತದೆ. ಅದರ ಬದಲಿಗೆ ಸರ್ಕಾರಿ ಶಾಲೆ ಹಾಗೂ ಶಿಕ್ಷಣ ವ್ಯವಸ್ಥೆಯ ಅಂಶಗಳನ್ನೆ ಮತ್ತಷ್ಟು ಬೆಳೆಸಿ, ಅದರ ಬಗ್ಗೆ ಹೆಚ್ಚು ಗಮನಕೊಟ್ಟಿದ್ದರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತು. ಅದರಲ್ಲೂ ಶಿಕ್ಷಣ ವ್ಯವಸ್ಥೆಯ ಕುರಿತಾದ ಟ್ರ್ಯಾಕ್‌ ತೆರೆದುಕೊಂಡಷ್ಟೇ ವೇಗದಲ್ಲಿ ಮುಗಿದು ಹೋಗುತ್ತದೆ. ಹಾಗಂತ ನಿರ್ದೇಶಕರು ಟ್ರ್ಯಾಕ್‌ ಬಿಟ್ಟು ಎಲ್ಲೂ ಹೋಗಿಲ್ಲ.

Advertisement

ಆದರೆ, ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ, ಇನ್ನು ಕೆಲವು ದೃಶ್ಯಗಳನ್ನು ಹೆಚ್ಚು ಗಂಭೀರವಾಗಿ ಚಿತ್ರಿಸುವ ಅವಕಾಶ ನಿರ್ದೇಶಕರಿಗಿತ್ತು. ಇಲ್ಲಿ ಅನಾವಶ್ಯಕ ಬಿಲ್ಡಪ್‌ಗ್ಳಾಗಲೀ, ಸಿಕ್ಕಾಪಟ್ಟೆ ಕಮರ್ಷಿಯಲ್‌ ಅಂಶಗಳಾಗಲೀ ಇಲ್ಲ. ಆ ಮಟ್ಟಿಗೆ ಕಥೆಗೆ ಹೆಚ್ಚು ಮಹತ್ವ ನೀಡಲಾಗಿದೆ. ಆದರೆ, ಮನರಂಜನೆ, ರೋಚಕತೆ ಇಷ್ಟಪಡುವವರಿಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಏಕೆಂದರೆ ಇಲ್ಲೊಂದು ಗಂಭೀರ ಕಥೆ ಇದೆ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತಾದ ಅಂಶಗಳನ್ನು ಹೇಳಲಾಗಿದೆ. ಕಿರಣ್‌ ರಾಜ್‌ ಈ ಚಿತ್ರದ ನಾಯಕ.

ಅವರ ಪಾತ್ರ ತುಂಬಾ ಪ್ರಮುಖವಾಗಿದೆ ಎನ್ನುವುದಕ್ಕಿಂತ ಸಿನಿಮಾದುದ್ದಕ್ಕೂ ಸಾಗಿಬರುತ್ತದೆ. ಆದರೆ, ಸಿನಿಮಾವನ್ನು ಮುನ್ನಡೆಸಿಕೊಂಡು ಹೋಗುವುದು ರಾಧಿಕಾ ಚೇತನ್‌. ಕಥೆ ತೆರೆದುಕೊಳ್ಳುವುದು, ಮುಂದಿನ ಪಯಣ ಎಲ್ಲವೂ ಇವರ ಪಾತ್ರದ ಮೂಲಕವೇ ಆಗುತ್ತದೆ. ರಾಧಿಕಾ ಕೂಡಾ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು, ಲಾಸ್ಯಾ ಪಾತ್ರಕ್ಕೆ ಹೆಚ್ಚಿನ ಮಹತ್ವವಿಲ್ಲ. ತೆರೆಮೇಲೆ ಇದ್ದಷ್ಟು ಹೊತ್ತು ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರಷ್ಟೇ. ಉಳಿದಂತೆ ದೀಪಕ್‌ ಶೆಟ್ಟಿ ಸೇರಿದಂತೆ ಇತರರು ನಟಿಸಿದ್ದಾರೆ. ಚಿತ್ರದ ಎರಡು ಹಾಡು ಚೆನ್ನಾಗಿವೆ.

ಚಿತ್ರ: ಅಸತೋಮ ಸದ್ಗಮಯ
ನಿರ್ಮಾಣ: ಅಶ್ವಿ‌ನ್‌ ಪಿರೇರಾ
ನಿರ್ದೇಶನ: ರಾಜೇಶ್‌ ವೇಣೂರು
ತಾರಾಗಣ: ಕಿರಣ್‌ರಾಜ್‌, ರಾಧಿಕಾ ಚೇತನ್‌, ಲಾಸ್ಯಾ, ದೀಪಕ್‌ ಶೆಟ್ಟಿ, ಬೇಬಿ ಚಿತ್ರಾಲಿ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next