Advertisement

Vijayapur: ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ; ತ್ಯಾಜ್ಯ ವಸ್ತು ಎಸೆಯಬೇಡಿ

06:31 PM Jun 01, 2023 | Team Udayavani |

ಆಲಮಟ್ಟಿ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಲಕ್ಷಾಂತರ ಹೆಕ್ಟೇರ್‌ ಪ್ರದೇಶಕ್ಕೆ ನೀರು ಜನ ಜಾನುವಾರುಗಳ ಆಶ್ರಯವೇ ಈ ನದಿ. ಕೃಷ್ಣಾ ನದಿಯು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮವಾಗಿ ಆಂಧ್ರದ ಹಂಸಲಾ ದೇವಿ ಎಂಬಲ್ಲಿ ಸಮುದ್ರ ಸೇರುತ್ತದೆ. ಈ ಬೃಹತ್‌ ನದಿಗೆ ಮಹಾರಾಷ್ಟ್ರದಲ್ಲಿ ಕೆಮಿಕಲ್‌ ನೀರು ಮಿಶ್ರಣ, ಕರ್ನಾಟಕದಲ್ಲಿಯೂ ನದಿ ಪಾತ್ರದಲ್ಲಿರುವ
ವಿವಿಧ ಕಾರ್ಖಾನೆಗಳ ಕಲ್ಮಷವೂ ನದಿಯಲ್ಲಿ ಸೇರುತ್ತಿವೆ.

Advertisement

ಇದರಿಂದ ಜಲಚರಗಳ ಪ್ರಾಣಕ್ಕೆ ಕಂಟಕಪ್ರಾಯವಾಗಿ ಪರಿಣಮಿಸುತ್ತಿದೆ. ಹೀಗೆಯೇ ಮುಂದುವರಿದರೆ ನಮ್ಮ ಗತಿ ಏನೂ ಅಂತ ಈಗ ಉತ್ತರ ಕರ್ನಾಟಕಕ್ಕೂ ಆತಂಕ ಶುರುವಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಂಕಲಿ ಗ್ರಾಮದ ಬಳಿ ಹರಿದಿರುವ
ಕೃಷ್ಣಾ ನದಿಯಲ್ಲಿ ಸಾಂಗ್ಲಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ನೀರು ಹಾಗೂ ಹಾಗೂ ಸಾಂಗ್ಲಿ ನಗರದ ಕಲುಷಿತ ನೀರನ್ನ ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ ನದಿಯಲ್ಲಿರುವ ಜಲಚರಗಳು ಸಾವನ್ನಪ್ಪಿರುವ ಸಂಗತಿಗಳು ಇತ್ತೀಚೆಗೆ ಬಯಲಾಗಿವೆ.

ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲೆಗಳಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು ಅವುಗಳ ತ್ಯಾಜ್ಯ ನೀರನ್ನು ಉತ್ತರ ಕರ್ನಾಟಕದ ಜೀವನದಿ ಎಂದು ಕರೆಸಿಕೊಳ್ಳುವ ಕೃಷ್ಣೆಗೆ ಹರಿ ಬಿಡಲಾಗುತ್ತಿದೆ ಇದರ ನಿಯಂತ್ರಣ ಸಾಧ್ಯವಿಲ್ಲವೇ?  ಸಾಂಗ್ಲಿಯ ಅಂಕಲಿಯಲ್ಲಿ ಈ ರೀತಿ ಮೀನುಗಳು ಸಾವನ್ನಪ್ಪಿದ್ದು ಮುಂದೆ ನೀರು ಕರ್ನಾಟಕದತ್ತ ಹರಿದು ಬರುತ್ತದೆ. ಇದರಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿನ ಬಹುತೇಕ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಇದೇ ಕೃಷ್ಣೆಯ ನೀರನ್ನು ಅವಲಂಬಿಸಿದ್ದಾರೆ.

ಇಂಥ ಕಲುಷಿತ ನೀರು ಸೇವಿಸಿ ಜನ ಜಾನುವಾರುಗಳಿಗೆ ತೊಂದರೆಯಾದರೆ ಯಾರು ಹೊಣೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಕೂಡಲೇ ಕರ್ನಾಟಕ ಸರ್ಕಾರವು ಕೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬೇಕು ಎನ್ನುತ್ತಾರೆ ನಾಗರಿಕರು. ಭಕ್ತರಿಂದ ತ್ಯಾಜ್ಯ: ಇನ್ನು ಕೃಷ್ಣಾ ನದಿ ದಡದಲ್ಲಿ ನದಿ ಪಾತ್ರದ ಉದ್ದಕ್ಕೂ ನೂರಾರು ದೇವಸ್ಥಾನಗಳಿವೆ. ದೇವಸ್ಥಾನಕ್ಕೆ ಆಗಮಿಸುವ ಬಹುತೇಕ ಭಕ್ತರು ತಾವು ಕಟ್ಟಿಕೊಂಡ ಹರಕೆಯನ್ನು ತೀರಿಸಲು ಕೃಷ್ಣೆಯ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುವುದು ವಾಡಿಕೆ. ಕೃಷ್ಣೆಯಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾವು ಧರಿಸಿದ್ದ ಉಡುಪನ್ನು ನದಿಯಲ್ಲಿಯೇ ಬಿಸಾಕುತ್ತಾರೆ.

ಇಷ್ಟೇ ಅಲ್ಲದೇ ದೂರದಿಂದ ಪ್ರತಿ ಯುಗಾದಿ, ದೀಪಾವಳಿ ಸೇರಿದಂತೆ ವಿಶೇಷ ದಿನಗಳಂದು ವಿವಿಧ ಭಾಗಗಳಿಂದ ದೇವರುಗಳ ಪಲ್ಲಕ್ಕಿ, ಛತ್ರಿ, ಚಾಮರ ಹೀಗೆ ದೇವ ದೇವತೆಗಳ ಭಿನ್ನವಾಗಿರುವ ಸಲಕರಣೆಗಳನ್ನೂ ಕೂಡ ನದಿಯಲ್ಲಿಯೇ ಬಿಸಾಕುತ್ತಾರೆ. ಇದರಿಂದ ಜಲಚರಗಳಿಗೆ ತೀವ್ರ ತೊಂದರೆಯಾಗಲಿದೆ. ಅಷ್ಟೇ ಅಲ್ಲದೇ ಜಲಮಲೀನಕ್ಕೂ ಕಾರಣವಾಗುತ್ತದೆ. ಆದ್ದರಿಂದ
ಪ್ರಜ್ಞಾವಂತರು ತ್ಯಾಜ್ಯ ವಸ್ತುಗಳನ್ನು ನದಿಯಲ್ಲಿ ಎಸೆಯಬಾರದು ಎನ್ನುತ್ತಾರೆ ಆಲಮಟ್ಟಿ ಗ್ರಾಪಂ ಅಧ್ಯಕ್ಷ ಮಂಜುನಾಥ ಹಿರೇಮಠ.

Advertisement

ಪ್ರತಿ ವರ್ಷವೂ ರಾಜ್ಯ ಸರ್ಕಾರಿ ನೌಕರರ ಸಂಘ ಯೋಜನಾ ಸಾಖೆ ಆಲಮಟ್ಟಿ ವತಿಯಿಂದ ಆಲಮಟ್ಟಿ ಶಾಸ್ತ್ರಿ ಸಾಗರದ ಹಿನ್ನೀರು ಪ್ರದೇಶವಾಗಿರುವ ಚಂದ್ರಮ್ಮ ದೇವಿ ದೇವಸ್ಥಾನದ ಬಳಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿ ಆ ಪ್ರದೇಶವನ್ನು ಸ್ವತ್ಛ ಮಾಡಿ ಆಗಮಿಸುವ ಭಕ್ತರಿಗೆ ಪರಿಸರ ಮಾಲಿನ್ಯ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದೇವೆ.
ಸದಾಶಿವ ದಳವಾಯಿ
ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘದ ಯೋಜನಾ ಶಾಖೆ ಆಲಮಟ್ಟಿ

ಜಿಲ್ಲೆಯ ಕೊನೆಯ ಗ್ರಾಮವಾಗಿರುವ ಯಲಗೂರಕ್ಕೆ ರಾಜ್ಯ ಹಾಗೂ ಅಂತಾರಾಜ್ಯಗಳಿಂದ ನಿತ್ಯ ಭಕ್ತಾದಿಗಳು ಆಗಮಿಸಿ
ಕೃಷ್ಣೆಯಲ್ಲಿ ಸ್ನಾನ ಮಾಡಿ ಯಲಗೂರೇಶನ (ಏಳೂರು ಹನುಮಪ್ಪನ) ದರ್ಶನಕ್ಕೆ ಬರುತ್ತಾರೆ. ಅವರು ಎಸೆದ ತ್ಯಾಜ್ಯಗಳು ನದಿ ಪಾಲಾಗದಿರಲಿ ಎಂದು ಸ್ಥಳೀಯ ಆಡಳಿತದಿಂದ ತೊಟ್ಟಿಗಳನ್ನು ಇರಿಸಲಾಗಿದೆ. ಭಕ್ತರು ತೊಟ್ಟಿಯಲ್ಲಿ ತಮ್ಮ ಬಟ್ಟೆಗಳನ್ನು ಅದರಲ್ಲಿಯೇ ಹಾಕುತ್ತಾರೆ.
ಶ್ಯಾಮ ಪಾತ್ರದ
ಅಧ್ಯಕ್ಷರು, ಪಿಕೆಪಿಎಸ್‌ ಬ್ಯಾಂಕ್‌ ಯಲಗೂರ

ಶಂಕರ ಜಲ್ಲಿ

 

Advertisement

Udayavani is now on Telegram. Click here to join our channel and stay updated with the latest news.

Next