Advertisement

ಕಾಫಿ-ಟೀ-ರಬ್ಬರ್‌ ಪ್ಲಾಂಟೇಶನ್‌ ಕೈಗಾರಿಕೆ ಉಳಿಸಿ

03:43 PM May 31, 2022 | Team Udayavani |

ಚಿಕ್ಕಮಗಳೂರು: ಕೋಟ್ಯಂತರ ಜನರಿಗೆ ಉದ್ಯೋಗ ನೀಡಿರುವ ಕಾಫಿ, ಟೀ, ರಬ್ಬರ್‌ ಪ್ಲಾಂಟೇಶನ್‌ ಕೈಗಾರಿಕೆಗಳನ್ನು ಉಳಿಸಿ ಬೆಳೆಸಬೇಕೆಂದು ದಿ ಎಸ್ಟೇಟ್‌ ಸ್ಟಾಪ್ಸ್‌ ಯೂನಿಯನ್‌ ಆಫ್‌ ಸೌತ್‌ ಇಂಡಿಯಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ತಿಳಿಸಿದರು.

Advertisement

ಭಾನುವಾರ ಬಾಳೆಹೊನ್ನೂರು ಸಮೀಪದ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ‘ದಿ ಎಸ್ಟೇಟ್‌ ಸ್ಟಾಪ್ಸ್‌ ಯೂನಿಯನ್‌ ಆಫ್‌ ಸೌತ್‌ ಇಂಡಿಯಾ’ ಚಿಕ್ಕಮಗಳೂರು-ಹಾಸನ ಘಟಕದ 44ನೇ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಕಾಫಿ, ಟೀ, ರಬ್ಬರ್‌ ಪ್ಲಾಂಟೇಷನ್‌ ಬಹುದೊಡ್ಡ ಕೃಷಿಯಾಗಿದ್ದು, ರಾಷ್ಟ್ರಕ್ಕೆ ಸಾವಿರಾರು ಕೋಟಿ ರೂ. ಆದಾಯ ನೀಡುತ್ತಿದೆ. ಬೃಹತ್‌ ಉದ್ಯಮವನ್ನು ಉಳಿಸಿ ಬೆಳೆಸಬೇಕಿದೆ. ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ಪ್ಲಾಂಟೇಷನ್‌ ಕೈಗಾರಿಕೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತಂದಿವೆ. ಕಾಫಿ ಮಂಡಳಿ, ಟೀ ಬೋರ್ಡ್‌, ರಬ್ಬರ್‌ ಬೋರ್ಡ್‌ ಮತ್ತು ಸಂಬಾರು ಮಂಡಳಿ ಮೂಲಕ ಜಾರಿಗೊಳಿಸಿದೆ ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಹುತೇಕ ಎಲ್ಲಾ ಯೋಜನೆಗಳನ್ನು ರದ್ದುಗೊಳಿಸಿದೆ. ಮಂಡಳಿಗಳು ಸ್ವಾಯುತ್ತತೆಯಿಂದ ಕೆಲಸ ಮಾಡದಂತೆ ಕಟ್ಟಿಹಾಕಿದೆ. ಮಂಡಳಿಗಳಿಗೆ ನೀಡುತ್ತಿದ್ದ ಆರ್ಥಿಕ ಸಹಕಾರವನ್ನು ಮೊಟಕುಗೊಳಿಸಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಕಾಫಿ, ಟೀ, ರಬ್ಬರ್‌ ಉದ್ಯಮವನ್ನು ಉಳಿಸಲು ದಿಟ್ಟಹೆಜ್ಜೆ ಇಡಬೇಕು. ಈ ನಿಟ್ಟಿನಲ್ಲಿ ಮಾಲೀಕರು ಮತ್ತು ಕಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಎಂದು ಅಭಿಪ್ರಾಯಿಸಿದರು.

Advertisement

ದಿ ಎಸ್ಟೇಟ್‌ ಸ್ಟಾಪ್ಸ್‌ ಯೂನಿಯನ್‌ ಆಫ್‌ ಸೌತ್‌ ಇಂಡಿಯಾ ಸಂಘದ ಅಧ್ಯಕ್ಷ ಪಿ.ಎಸ್. ರೆಬೆಲ್ಲೋ ಮಾತನಾಡಿ, ದಕ್ಷಿಣ ಭಾರತ ಕಾರ್ಮಿಕರ ಹಿರಿಯ ಸಂಘವಾಗಿದ್ದು, ಮಾಲೀಕರ ಸಂಘಟನೆ ಉಪಾಸಿ ಹಾಗೂ ದಕ್ಷಿಣ ಭಾರತದ ರಾಜ್ಯ ಸಂಘ ಕಾರ್ಮಿಕರ ವೇತನ ಹಾಗೂ ಸೌಲಭ್ಯಕ್ಕಾಗಿ ಅನೇಕ ದಶಕಗಳಿಂದ ಹೋರಾಡುತ್ತಿದೆ ಎಂದು ತಿಳಿಸಿದರು. ದಿ ಎಸ್ಟೇಟ್‌ ಸ್ಟಾಪ್ಸ್‌ ಯೂನಿಯನ್‌ ಆಫ್‌ ಸೌತ್‌ ಇಂಡಿಯಾ ಸಂಘದ ಉಪಾಧ್ಯಕ್ಷ ಎಚ್‌. ಸುಧಾಕರ ಶೆಟ್ಟಿ ಮಾತನಾಡಿದರು.

ಎ.ರಘು ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜು ದೊರೈ, ಹರಿಕೃಷ್ಣ, ಎಚ್‌. ಎಂ. ಗಂಗಾಧರ್‌, ಸಿಸಿಆರ್‌ಐ ಕಾರ್ಯದರ್ಶಿ ಟಿ.ಪಿ. ಪೊನ್ನಪ್ಪ, ಸತೀಶ್‌ ಕುಮಾರ್‌, ಚಂದ್ರಹಾಸ್‌, ಮಹಾಂತೇಶ್‌, ಶೈಲೇಶ್‌ಕುಮಾರ್‌ ಇದ್ದರು. ಟಿ.ಪಿ. ಪೊನ್ನಪ್ಪ ಸ್ವಾಗತಿಸಿದರು. ಶೈಲೇಶ್‌ಕುಮಾರ್‌ ವಂದಿಸಿದರು.

ಬಾಳೆಹೊನ್ನೂರು ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ 2025ಕ್ಕೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಸಂಶೋಧನಾ ಕೇಂದ್ರ ಕಾಯಕಲ್ಪ ಮಾಡುವ ಮೂಲಕ ಕಾಫಿ ಕೈಗಾರಿಕೆ ಹೊಸ ತಳಿಯ ಸಂಶೋಧನೆ, ಸಲಹೆ, ಸಹಕಾರ ಮುಂದುವರಿಯುವಂತೆ ನೋಡಿಕೊಳ್ಳಬೇಕು. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ನೌಕರರಿಗೆ 18 ಸಾವಿರ ರೂ. ಮಾಸಿಕ ಮೂಲ ವೇತನ ಘೋಷಿಸಬೇಕು. ಪ್ಲಾಂಟೇಷನ್‌ ಕೈಗಾರಿಕೆ ಕಾರ್ಮಿಕರು ಮತ್ತು ನೌಕರರಿಗೆ ಮಾರಕವಾಗಿರುವ ಇಎಸ್‌ಐ ಯೋಜನೆಯನ್ನು ಜಾರಿಗೊಳಿಸದೆ ಈಗಿರುವ ವೈದ್ಯಕೀಯ ವ್ಯವಸ್ಥೆ ಮುಂದುವರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next