ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗೂಂಡಾಗಿರಿ, ಭ್ರಷ್ಟಾಚಾರದಿಂದ ಬೆಂಗಳೂರು ರಕ್ಷಿಸಿ ಎಂದು ಘೋಷವಾಕ್ಯದೊಂದಿಗೆ ಬಿಜೆಪಿ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಾ. 2ರಿಂದ 15ರವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರ, ಕಳಪೆ ಮೂಲ ಸೌಕರ್ಯ, ನಿಯಂತ್ರಣ ತಪ್ಪಿದ ಸಂಚಾರ ವ್ಯವಸ್ಥೆ ಮತ್ತು ಬೆಂಕಿ ಹತ್ತಿ ಉರಿಯುತ್ತಿರುವ ಕೆರೆಗಳು ಎಂಬ ಐದು ಪ್ರಮುಖ ವಿಚಾರಗಳನ್ನು ಇಟ್ಟುಕೊಂಡು ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ. 2ರಂದು ಬೆಳಗ್ಗೆ 9 ಗಂಟೆಗೆ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನ ಮತ್ತು ಗವಿ ಗಂಗಾಧರೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಬಳಿಕ ದೇಗುಲದ ಬಳಿಯಿರುವ ಕೆಂಪೇಗೌಡರ ಪ್ರತಿಮೆಗೆ ಗೌರವ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಗುವುದು ಎಂದರು.
ಪಾದಯಾತ್ರೆಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಪ್ರಕಾಶ್ ಜಾವಡೇಕರ್, ರಾಜ್ಯ ಉಸ್ತುವಾರಿ ಮುರಳೀಧರರಾವ್, ನಗರದ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಮಾ. 15ರವರೆಗೆ ಪ್ರತಿದಿನ ಪಾದಯಾತ್ರೆ ನಡೆಯಲಿದೆ. ಮಾ. 15ರಂದು ಸಮಾರೋಪ ನಡೆಯಲಿದ್ದು, ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕರೆಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕಾಂಗ್ರೆಸ್‌ನವರ ಗೂಂಡಾಗಿರಿ ಹೆಚ್ಚಾಗಿದೆ. ಇದಕ್ಕೆ ಆಡಳಿತ ನಡೆಸುವವರೇ ಕುಮ್ಮಕ್ಕು ನೀಡುತ್ತಿರುವುದು ಸಾಬೀತಾಗಿದೆ. ಇದಕ್ಕೆ ಇತ್ತೀಚೆಗೆ ಉದ್ಯಮಿ ಪುತ್ರ ವಿದ್ವತ್ ಮೇಲೆ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ನಡೆಸಿದ ಹಲ್ಲೆ ಪ್ರಕರಣ ಸೇರಿದಂತೆ ನಗರದಲ್ಲಿ ನಡೆದಿರುವ ದೌರ್ಜನ್ಯ ಪ್ರಕರಣಗಳೇ ಉದಾಹರಣೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕರಾದ ಎಸ್.ಸುರೇಶ್‌ಕುಮಾರ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಮಚಂದ್ರಗೌಡ, ಬಿ.ಎನ್.ವಿಜಯಕುಮಾರ್, ರವಿಸುಬ್ರಮಣ್ಯ, ಕೃಷ್ಣಪ್ಪ ಮತ್ತಿತರರು ಇದ್ದರು.