ಶಿವಮೊಗ್ಗ: ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಅಭಿಯಾನ ಮುಂದುವರೆದಿದ್ದು, ಇದಕ್ಕಾಗಿ ಕಾಲೇಜ್‌ನ ಹಳೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ.
ಸಹ್ಯಾದ್ರಿ ಕಾಲೇಜಿನ 18.4 ಎಕರೆ ಜಾಗವನ್ನು ಖಾಸಗಿಯವರಿಗೆ ನೀಡಲು ಹೊರಟಿರುವುದನ್ನು ಖಂಡಿಸಿ ಮತ್ತು ಯೋಜನೆ ವಿರೋ ಧಿಸಿ ಕುವೆಂಪು ವಿವಿ ಕುಲಪತಿಗೆ ಇ -ಮೇಲ್ ಮಾಡುವ ಮೂಲಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳೆಲ್ಲರೂ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಖೇಲೋ ಇಂಡಿಯಾ ಹಾಗೂ ಸಾಯ್ ಸಂಸ್ಥೆಗೆ ಜಾಗ ನೀಡಲು ನಮ್ಮ ವಿರೋಧವಿದೆ. ಇದರಿಂದ ನಮ್ಮ ಕ್ಯಾಂಪಸ್‌ನ್ನು ನಾವು ಕಳೆದುಕೊಳ್ಳುತ್ತೇವೆ. ಹಾಗಾಗಿ ನೀವು ಈ ಪ್ರಾಜೆಕ್ಟ್ಗೆ ಒಪ್ಪಿಗೆ ಸೂಚಿಸಬಾರದು ಎಂದು ಈ ಮೂಲಕ ಮನವಿ ಮಾಡುತ್ತೇವೆ ಎಂಬ ಇ-ಮೇಲ್ ಸಂದೇಶವನ್ನು ಹಳೆಯ ವಿದ್ಯಾರ್ಥಿಗಳು ಈಗಾಗಲೇ ಕುವೆಂಪು ವಿವಿ ಕುಲಪತಿಗೆ ಕಳುಹಿಸುತ್ತಿದ್ದಾರೆ. ಇದಲ್ಲದೇ, ಟ್ವಿಟರ್ ಮೂಲಕವೂ ಕೂಡ ಹಳೆ ವಿದ್ಯಾರ್ಥಿಗಳು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದರ ಜೊತೆಗೆ ಮೇ 1 ರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಹಳೆಯ ವಿದ್ಯಾರ್ಥಿಗಳು ಮತ್ತು ಈ ಚಳವಳಿಯನ್ನು ಬೆಂಬಲಿಸುವವರು ತಮ್ಮ ವಾಟ್ಸಾಪ್, ಫೇಸ್ ಬುಕ್, ಡಿಪಿ ಮತ್ತು ಸ್ಟೇಟಸ್ ಗಳಲ್ಲಿ ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಇಮೇಜ್ ಅನ್ನು ಅಳವಡಿಸಿಕೊಳ್ಳಲು ಕರೆ ನೀಡಲಾಗಿದೆ.
ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಮಂಜೂರಾಗಿರುವುದು ಸ್ವಾಗತವಾದರೂ, ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್‌ನಲ್ಲಿ ಇದನ್ನು ಸ್ಥಾಪಿಸುವುದು ಬೇಡ, ಇದರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇದಕ್ಕಾಗಿ ಬೇರೆ ಕಡೆ ಜಾಗವನ್ನು ಗುರುತಿಸಿ ಅಲ್ಲೇ ಆರಂಭಿಸಲಿ. ಕ್ಯಾಂಪಸ್ ಉಳಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಸಹ್ಯಾದ್ರಿ ಕಾಲೇಜ್‌ನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ. ಗುರುಮೂರ್ತಿ ಅವರು ಮನವಿ ಮಾಡಿದ್ದಾರೆ.