Advertisement

ಮಹದಾಯಿ ಉಳಿವಿಗೆ ಮತ್ತೆ ಹೋರಾಟ! ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರುದ್ಧ ಗೋವಾ ಜನರ ಆಕ್ರೋಶ

03:44 PM Oct 01, 2020 | sudhir |

ಪಣಜಿ: ಕೇಂದ್ರ ಸರ್ಕಾರದ ಈ ನೀತಿ ವಿರೋಧಿ ಸಿ ಮಹದಾಯಿ ನದಿ ಉಳಿವಿಗಾಗಿ ಅಕ್ಟೋಬರ್‌ನಿಂದ ಗೋವಾದಲ್ಲಿ ಮತ್ತೆ
ಹೋರಾಟ ಆರಂಭಿಸಲಾಗುವುದು ಎಂದು ವಕೀಲ ಹೃದಯನಾಥ ಶಿರೋಡಕರ್‌ ಮಾಹಿತಿ ನೀಡಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ ಸಂದರ್ಭದಲ್ಲಿ ಕರ್ನಾಟಕವು ಮಹದಾಯಿ ನದಿ ನೀರನ್ನು
ತಿರುಗಿಸಿಕೊಂಡಿದ್ದರೂ ಗೋವಾ ಸರ್ಕಾರ ಇದರ ವಿರುದ್ಧ ನಿರ್ಣಯ ತೆಗೆದುಕೊಳ್ಳುವ ಬದಲು ಮೌನ ತಾಳಿದೆ.

ಗೋವಾಕ್ಕೆ ಕೇಂದ್ರ ಸರ್ಕಾರವು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಗೋವಾ ಜನರ ಹಿತ ಕಾಪಾಡುವತ್ತ ಗಮನವಿಲ್ಲ.
ಕರ್ನಾಟಕಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಮಹದಾಯಿ ನದಿ ನೀರನ್ನು ಕರ್ನಾಟಕ ತಿರುಗಿಸಿಕೊಳ್ಳುವುದರಿಂದ ಗೋವಾ
ಪರಿಸರದ ಮೇಲೆ ಭಾರಿ ದುಷ್ಟರಿಣಾಮ ಉಂಟಾಗಲಿದೆ. ಹೀಗಿದ್ದರೂ ಕೂಡ ಸರ್ಕಾರದ ಒತ್ತಡದಿಂದ ಜೈವಿಕ ವೈವಿಧ್ಯತೆ
ವಿಭಾಗದಲ್ಲಿ ಕೆಲಸ ನಿರ್ವಹಿಸುವ ಹೆಸರಾಂತ ಪರಿಸರ ಹೋರಾಟಗಾರರು ಸುಮ್ಮನೆ ಕುಳಿತಿದ್ದಾರೆ. ಇದರಿಂದಾಗಿ ಖುರ್ಚಿ
ಮಹತ್ವದ್ದೊ ಅಥವಾ ಪರಿಸರ ಮಹತ್ವದ್ದೊ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಹೃದಯನಾಥ ಶಿರೋಡಕರ್‌
ಆಗ್ರಹಿಸಿದರು. ಕಾಂಗ್ರೆಸ್‌ ಶಾಸಕ ಅಲೆಕ್ಸ ರೆಜಿನಾಲ್ಡ ಮಾತನಾಡಿ, ಕರ್ನಾಟಕವು ಕಳಸಾ-ಬಂಡೂರಿ ನಾಲೆ ಮತ್ತು ಮಲಪ್ರಭೆಗೆ
ಎಷ್ಟು ಪ್ರಮಾಣದ ಮಹದಾಯಿ ನದಿ ನೀರನ್ನು ತಿರುಗಿಸಿದೆ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರ ಕಲೆಹಾಕಬೇಕಿತ್ತು. ಲಾಕ್‌ಡೌನ್‌ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಕರ್ನಾಟಕ ಸರ್ಕಾರವು ಕಳಸಾ-ಬಂಡೂರಿ ನಾಲೆ ಕಾಮಗಾರಿ
ನಡೆಸುತ್ತಲೇ ಇದೆ. ಮತ್ತು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿದೆ.

ಕೇಂದ್ರ ಸರ್ಕಾರಕ್ಕೆ ಗೋವಾದ ಹಿತ ಕಾಪಾಡುವ ಅಗತ್ಯವಿಲ್ಲ, ಕಾರಣವೆಂದರೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕದಿಂದ
ಆಯ್ಕೆಯಾದ ಬಿಜೆಪಿಯ 27 ಸಂಸದರು ಮುಖ್ಯವಾಗಿದ್ದಾರೆ. ಮಹದಾಯಿ ಗೋವಾದ ತಾಯಿಯಾಗಿದ್ದಾಳೆ ಎಂದು ಹೇಳುವ ಗೋವಾ ಮುಖ್ಯಮಂತ್ರಿಗಳು ಮಹದಾಯಿ ನದಿ ನೀರನ್ನು ಕರ್ನಾಟಕವು ತಿರುಗಿಸಿಕೊಂಡಿದ್ದರೂ ಸುಮ್ಮನೆ
ಕುಳಿತುಕೊಂಡಿದ್ದಾರೆ. ಇವೆಲ್ಲದಕ್ಕೂ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಅವರೇ ಜವಾಬ್ದಾರರಾಗಿದ್ದು ನೈತಿಕ ಹೊಣೆ
ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪ್ರೊಗ್ರೆಸಿವ್‌ ಫ್ರಂಟ್‌ನ ರಾಜನ್‌ ಘಾಟೆ, ವಿಶ್ರಾಮ ಪರಬ್‌,
ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next