ಮಾಲೂರು: ನಮ್ಮ ಪೂರ್ವಜರು ನಿರ್ಮಿಸಿರುವ ಕೆರೆ, ಕುಂಟೆ, ರಾಜಕಾಲುವೆ, ಗುಂಡುತೋಪುಗಳನ್ನು ಸಂರಕ್ಷಿಸಿ, ಸಸಿ ನೆಟ್ಟು ಪೋಷಣೆ ಮಾಡಿ ಮುಂದಿನ ಪೀಳಿಗೆಗೆ ನೀರು ಉಳಿಸುವಂತೆ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶೆ ಡಿ.ಅನುಪಮಾ ತಿಳಿಸಿದರು.
ತಾಲೂಕಿನ ಜಯಮಂಗಲ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ಅರಣ್ಯ, ಪೊಲೀಸ್ ಇಲಾಖೆ, ಗ್ರಾಪಂ, ಪರಿವಾರ ಫೌಂಡೇಷನ್ ಹಾಗೂ ಕ್ರೈಸ್ಟ್ ಕಾಲೇಜಿನಿಂದ ಹಮ್ಮಿಕೊಂಡಿದ್ದ 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನದಲ್ಲಿ ಅಳವಡಿಸಿಕೊಳ್ಳಿ: ಪ್ರತಿಯೊಬ್ಬರೂ ತಮ್ಮ ಮನೆ ಅಂಗಳದಲ್ಲಿ 2 ಮರ ಬೆಳೆಸಿ ನೀರನ್ನು ವ್ಯರ್ಥ ಮಾಡದೇ, ಮಿತವಾಗಿ ಬಳಕೆ ಮಾಡಿ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಿ. ಸಂರಕ್ಷಿಸಿದ ನೀರನ್ನು ಬಳಕೆ ಮಾಡಿ, ಅಂತರ್ಜಲ ಪುನಶ್ಚೇತನ ಮಾಡಿಕೊಳ್ಳಿ, ಪ್ಲಾಸ್ಟಿಕ್‌ಅನ್ನು ಬಳಸದೆ ಆರೋಗ್ಯಕ್ಕೆ ಅನುಕೂಲಕರವಾದ ಪದ್ಧತಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಿರ್ಲಕ್ಷ್ಯ ಮಾಡ್ತಾರೆ: ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಮಾತನಾಡಿ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ತಿರುಗಿ ಬಿದ್ದಿಲ್ಲ ಎಂದರೇ ಮಜಾ ಮಾಡಿಕೊಂಡು ಕಾಲಹರಣ ಮಾಡುತ್ತ, ಜನರ ಕೆಲಸಗಳು ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ ಎಂದು ಹೇಳಿದರು.
ಇಒಗೆ ಪ್ರಶ್ನೆ: ತಾಲೂಕಿನ ಅರಣ್ಯ ಅಧಿಕಾರಿಗಳು ನೀಲಗಿರಿ ಸಸಿ ತೆಗೆಯುವ ವಿಚಾರದಲ್ಲಿ ನ್ಯಾಯಾಧೀಶರಿಗೆ ಸುಳ್ಳು ಮಾಹಿತಿ ನೀಡುತ್ತಾರೆ. ಇಒ ಸಾರ್ವಜನಿಕರಿಗೆ ನೂರು ಸಸಿ ನೆಡುವಂತೆ ಸಭೆಯಲ್ಲಿ ಹೇಳುತ್ತಾರೆಯೇ ಹೊರೆತು, ಅವರು ಹೇಳಲ್ಲ. ನೀವು ಎಷ್ಟು ಸಸಿ ನೆಟ್ಟಿದ್ದೀರಿ ಎಂದು ಇಒ ಅವರನ್ನು ಪ್ರಶ್ನಿಸಲಾಯಿತು. ಗ್ರಾಪಂ ಅಧ್ಯಕ್ಷ ರಘು ನೇತೃತ್ವದಲ್ಲಿ 50 ಎಕರೆಯಲ್ಲಿ 25 ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಅಧಿಕಾರಿ ವಿರುದ್ಧ ಗುಡುಗು: ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಪ್ರಮುಖ ಪಾತ್ರವಿದ್ದು, ಅಧಿಕಾರಿಗಳೇ ಗೈರು ಹಾಜರಾದರೇ ಇಲಾಖೆ ಯೋಜನೆಗಳು, ಮಾಹಿತಿ ಹಾಗೂ ಸಹಕಾರ ನೀಡವವರು ಯಾರು ಎಂದು ಅರಣ್ಯ ಅಧಿಕಾರಿ ವಿರುದ್ಧ ದೂರಿದರು.
ನ್ಯಾಯಾಧೀಶರಾದ ಎಂ.ಜಿ.ಲೋಕೇಶ್, ಕೆ.ಪುಷ್ಪಲತಾ, ಎಂ.ಆರ್.ಯೋಗೇಶ್, ತಾಪಂ ಸದಸ್ಯೆ ವಸಂತಮ್ಮ, ಇಒ ಕೃಷ್ಣಪ್ಪ, ಗ್ರಾಪಂ ಅಧ್ಯಕ್ಷ ಕೆ.ರಘುನಾಥ್, ಪಿಡಿಒ ಭಾನುಮತಿ, ಕಾರ್ಯದರ್ಶಿ ರಮೇಶ್, ವಕೀಲರ ಸಂಘದ ಕಾರ್ಯದರ್ಶಿ ಸಿ.ಅಶ್ವತ್ ನಾರಾಯಣ, ಉಪಾಧ್ಯಕ್ಷ ಅಮರನಾರಾಯಣ, ವಕೀಲರಾದ ಕೆ.ನಾರಾಯಣಪ್ಪ, ಕೆ.ಮಂಜುನಾಥ್, ಹರೀಶ್‌ಕುಮಾರ್, ಟಿ.ಅಂಗಸಗಿರಿಯಪ್ಪ, ರಾಜ್ ಕುಮಾರ್, ಸಂಜಯ್‌ಕುಮಾರ್, ಪಿಎಸ್‌ಐ ವಸಂತ್, ಪರಿವಾರ ಫೌಂಡೇಷನ್ ಹರೀಶ್, ಮುಖಂಡ ಆಗ್ರಿನಾರಾಯಣಪ್ಪ, ನಂದೀಶ್‌ಗೌಡ ಇತರರಿದ್ದರು.