ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶ ಉಳಿಸುವ ನಿಟ್ಟಿನಲ್ಲಿ ಈಶ ಫೌಂಡೇಶನ್ ಹಮ್ಮಿಕೊಂಡಿರುವ ‘ಕಾವೇರಿ ಕೂಗು ಅಭಿಯಾನ’ಕ್ಕೆ ಮಂಗಳವಾರ ಮಡಿ ಕೇರಿಯ ತಲಕಾವೇರಿಯಲ್ಲಿ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸದ್ಗುರು, ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಆ ಸಮಯ ಈಗ ಬಂದಿದ್ದು, ಕಾವೇರಿ ಕೊಳ್ಳ ನಂಬಿಕೊಂಡಿರುವ 84 ದಶಲಕ್ಷ ಜನರ ಜೀವನವನ್ನು ಪರಿವರ್ತಿ ಸುವ ಉದ್ದೇಶದಿಂದ ಈ ಅಭಿಯಾನ ನಡೆಯುತ್ತಿದೆ. 3,500 ಕಿ.ಮೀ.ಬೈಕ್ ರ್ಯಾಲಿ ಮೂಲಕ ‘ಕಾವೇರಿ ಕೂಗು’ ಅಭಿಯಾನ ನಡೆಯಲಿದೆ ಎಂದರು.
ಕ್ರೀಡಾಪಟು ಅಶ್ವಿನಿ ನಾಚಪ್ಪ ಮಾತನಾಡಿ, ನದಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಮುಖ್ಯವಾಗಿ ಕಾವೇರಿ ಕೂಗಿಗೆ ನಾವೆಲ್ಲಾ ಬದ್ಧರಾಗಿದ್ದೇವೆ. ಕೊಡಗಿನ ಜನರು ಸೇರಿದಂತೆ ನಾಡಿನ ಜನರು ಇದಕ್ಕೆ ಬೆಂಬಲ ವ್ಯಕ್ತಪಡಿಸಬೇಕು ಎಂದರು.
ನಟ ರಕ್ಷಿತ್ ಶೆಟ್ಟಿ ಮಾತನಾಡಿ, ನೀರಿಗಾಗಿ ಹಲವಾರು ಕ್ರಾಂತಿಗಳಾಗಿವೆ. ಕಾವೇರಿ ನಮ್ಮ ಜೀವನಾಡಿಯಾಗಿದ್ದು, ನಾವೆಲ್ಲ ಕಾವೇರಿ ನದಿಯನ್ನು ಉಳಿಸಲು ಸದ್ಗುರು ಅವರ ಜತೆಗಿರುತ್ತೇವೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ಜಿ.ಬೋಪಯ್ಯ, ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಮತ್ತಿತರರು ಭಾಗವಹಿಸಿದ್ದರು.