Advertisement

ಸರ್ಕಾರಿ ಶಾಲೆ ಉಳಿಸುವ ಕಾರ್ಯ ಮಾಡಿ

05:10 PM May 08, 2022 | Team Udayavani |

ಹರಪನಹಳ್ಳಿ: ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಬೇಕು, ಆದರೆ ಉದ್ಯೋಗ ಮಾತ್ರ ಸರ್ಕಾರದ್ದು ಆಗಬೇಕು ಎನ್ನುವವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸಂಪ್ರದಾಯ ಟ್ರಸ್ಟ್‌ನ ಅಧ್ಯಕ್ಷ ಬಿ. ಪರುಶುರಾಮ್‌ ಹೇಳಿದರು.

Advertisement

ಪಟ್ಟಣದ ಕಾಶಿ ಸಂಗಮೇಶ್ವರ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ ಮೈದೂರು ಶ್ರೀಮತಿ ಸಾವಿತ್ರಮ್ಮ ದತ್ತಿ, ಶ್ರೀ ಹಾಲನಾಯ್ಕ ಲಷ್ಕರಿನಾಯ್ಕ ದತ್ತಿ, ಬಾಗಳಿ ಶ್ರೀಮತಿ ಕೆಂಚಮ್ಮ ಮಾಗಳದ ಮಲ್ಲಿ ಕಾರ್ಜುನಪ್ಪ ದತ್ತಿ, ಶ್ರೀಮತಿ ಸರ್ವಮಂಗಳಮ್ಮ ಮಹಾಶರಣ ಮಾಗನೂರು ಬಸಪ್ಪ ದತ್ತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಾತಿ, ಧರ್ಮಕ್ಕೆ ಸೀಮಿತವಾಗಬಾರದು. ಸರ್ವ ಜನಾಂಗದ ನಾಡು ನುಡಿ, ಜಲ ಭಾಷೆಗೆ ಶ್ರಮಿಸುವಂತಾಗಬೇಕು. ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕು ಎಂಬ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಗೊತ್ತಿಲ್ಲದ ಭಾಷೆಯಿಂದ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ, ಬೇರೆ ಭಾಷೆ ಬದುಕಿಗೆ ಇರಲಿ ಕನ್ನಡ ಭಾಷೆ ಹೃದಯ ಭಾಷೆಯಾಗಿರಲಿ ಎಂದರು.

ಮರಿಮ್ಮನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜ್‌ ಉಪನ್ಯಾಸಕ ಸೋಮಶೇಖರ್‌ ಉಪ್ಪಾರ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಡಾ| ಚಿಕ್ಕಣ್ಣ ಎನ್ನಿ ಕಟ್ಟಿ, ಶರಣರ ಜೀವನ ದರ್ಶನ ವಚನ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯ ಕಲೆಗಳ ಬಗ್ಗೆ ಉಪನ್ಯಾಸ ನೀಡಿ, ಸಾವಿರಾರು ಜನರಿಗೆ ಲಿಂಗ ಕಟ್ಟಿ ಅತ್ಮಾಭಿಮಾನ ಬೆಳೆಸಿ ಲಿಂಗತಾರತಮ್ಮ ಜಾತಿ ತಾರತಮ್ಮ ಹೋಗಲಾಡಿಸಲು ಬಸವಣ್ಣನವರು ಶ್ರಮಿಸಿ ಸಫಲರಾದರು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾವಿರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಎಲ್ಲರಲ್ಲೂ ಹೃದಯ ಭಾಷೆಯಾಗಬೇಕು. ತಾಲೂಕಿನಲ್ಲಿ ಬೀಚಿ, ಭೀಮವ್ವ, ಮುದೇನೂರು ಸಂಗಣ್ಣ, ಹಲವಾಗಲು ದೇವೇಂದ್ರಪ್ಪ ಸೇರಿದಂತೆ ಅನೇಕ ಯುವ ಕವಿಗಳು ಇದ್ದಾರೆ. ಐತಿಹಾಸಿಕ ದೇವಸ್ಥಾನಗಳು ಅತ್ಯಂತ ಪ್ರಸಿದ್ಧವಾಗಿದ್ದು ತಾಲೂಕಿನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ. ಜಿಲ್ಲಾ ಸಾಹಿತ್ಯ ಸಮ್ಮೇಳನ ಅನೇಕ ತಾಲೂಕು ಸಮ್ಮೇಳನಗಳನ್ನು ನಡೆಸಿ ಜನರಿಗೆ ಕನ್ನಡ ಸಾಹಿತ್ಯದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೇಳಲಾಗಿದ್ದು ಎಲ್ಲ ವರ್ಗದ ಜನರಿಗೆ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ನಾಡುನುಡಿ ಬಗ್ಗೆ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು. ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಅಧ್ಯಕ್ಷೆ ಟಿ.ವಿ. ರೇಣುಕಮ್ಮ ಮಾತನಾಡಿದರು.

Advertisement

ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಜಿ.ಮಹಾದೇವಪ್ಪ, ಗೌರವ ಕೋಶಾಧಿಕಾರಿ ಕೆ. ರಾಘವೇಂದ್ರ ಶೆಟ್ಟಿ, ಕಾರ್ಯಕಾರಿ ಮಂಡಳಿ ನಿರ್ದೇಶಕರುಗಳಾದ ಎಸ್‌. ಮಕಬುಲ್‌ ಭಾಷ, ಬಿ.ಎಂ. ನಾಗರಾಜ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಕಾರ್ಯದರ್ಶಿ ಮಾಳಮ್ಮ ಸೇರಿದಂತೆ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next